ಒತ್ತುವರಿದಾರರಿಗೆ ನೋಟಿಸ್​ ನೀಡಿ

ಕ್ಲೀನ್​ ಚಿಂತಾಮಣಿ ಅಭಿಯಾನಕ್ಕೆ ಚಾಲನೆ ದೊರಕಿಸಿಕೊಟ್ಟ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಕನ್ನಂಪಲ್ಲಿಯಲ್ಲಿ ಪಾದಚಾರಿ ರಸ್ತೆ ಒತ್ತುವರಿ ಮಾಡಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ಅಂಗಡಿಯನ್ನು ಖುದ್ದು ತೆರವುಗೊಳಿಸಿದರು.
Ottuvaridararige Notice Needalu Suchane
Published on


ಸ್ವಚ್ಛ ಚಿಂತಾಮಣಿ ಅಭಿಯಾನಕ್ಕೆ ಡಿಸಿ ಚಾಲನೆ: ಬೆಂಗಳೂರು ಜೋಡಿ ರಸ್ತೆ ಒತ್ತುವರಿ ತೆರವು

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿಯಿಂದ ನಗರಸಭೆ ಕಚೇರಿ ವೃತ್ತದವರೆವಿಗೂ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ ಅವರು, ನಗರಸಭೆ ಪೌರಾಕಾರ್ಮಿಕರು, ಸರ್ಕಾರಿ ಮಹಿಳಾ ಮತ್ತು ಬಾಲಕರ ಕಾಲೇಜಿನ ಎನ್​ಎಸ್​ಎಸ್​ ಮತ್ತು ಎನ್​ಸಿಸಿ ಘಟಕ ಹಾಗೂ ನಗರಸಭೆ ಸದಸ್ಯರೊಂದಿಗೆ ಸ್ವಚ್ಛತಾ ಕಾರ್ಯ ನೆರವೇರಿಸಿ ಸ್ವಚ್ಛ ಚಿಂತಾಮಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ನಗರದ ಬೆಂಗಳೂರು ಜೋಡಿ ರಸ್ತೆ ಮತ್ತು ಪಾದಚಾರಿ ರಸ್ತೆ ಒತ್ತುವರಿ ಮಾಡಿಕೊಂಡು ಸೀಮೆಂಟ್​ ಇಟ್ಟಿಗೆ, ಗ್ರಾನೈಟ್​ ಅಂಗಡಿ, ಟೀ ಮತ್ತು ತರಕಾರಿ ಅಂಗಡಿ ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಒತ್ತುವರಿ ಬಗ್ಗೆ ಗಮನಹರಿಸದ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಆರತಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಡಿಸಿ, ಒತ್ತುವರಿದಾರರಿಗೆ ನೋಟಿಸ್​ ನೀಡಿ ತೆರವುಗೊಳಿಸಬೇಕು. ತೆರವು ಕಾರ್ಯದ ಕುರಿತ ಚಿತ್ರವನ್ನು ವಾಟ್ಸ್​ ಆ್ಯಪ್​ ಮೂಲಕ ನನಗೆ ಅಪ್​ಡೇಟ್​ ಮಾಡುವಂತೆ ಸೂಚಿಸಿದರು.
ಯಾವುದೇ ಪರವಾನಗಿ ಇಲ್ಲದೆ ಈಗಾಗಲೇ ಇರುವ ಪಾರ್ಟಿ ಹಾಲ್​ ಮುಂಭಾಗದಲ್ಲಿ ಮತ್ತೊಂದು ಕಲ್ಯಾಣ ಮಂಟಪವನ್ನು ನಿಮಾರ್ಣ ಮಾಡುತ್ತಿದ್ದಾರೆ, ಶೌಚಗೃಹದ ನೀರನ್ನು ರಸ್ತೆಗೆ ಬಿಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮಹಿಳೆಯೊಬ್ಬರು ವಿವರಿಸಿದರು.
ಕೂಡಲೇ ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿದರಲ್ಲದೆ, ಕಲ್ಯಾಣ ಮಂಟಪದ ಮಾಲೀಕರನ್ನು ಕರೆಸಲು ಸೂಚಿಸಿದರು. ಆದರೆ ಮಾಲೀಕರು ಸ್ಥಳಕ್ಕೆ ಬಾರದೆ ನಗರಸಭೆ ಸಿಬ್ಬಂದಿಯೊಂದಿಗೆ ದೌರ್ಜನ್ಯ ಪ್ರದರ್ಶಿಸಿದಕ್ಕೆ ಸಿಟ್ಟಿಗೆದ್ದ ಡಿಸಿ, ಮಾಲೀಕರಿಗೆ ನೋಟಿಸ್​ ನೀಡುವುದರ ಜತೆಗೆ ದಾಖಲಾತಿ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ ಅವರಿಗೆ ಸೂಚನೆ ನೀಡಿದರು.
ನಗರದ ಎಲ್ಲ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆಯ ಜತೆಗೆ, ಮನೆ ಮತ್ತು ಅಂಗಡಿಗಳ ಬಳಿ ಸ್ವಚ್ಛತೆ ಮಾಡಿಕೊಳ್ಳಬೇಕು. ಹಸಿ ಮತ್ತು ಒಣ ಕಸ ಬೇರ್ಪಡಿಸಿ ಪ್ಲಾಸ್ಟಿಕ್​ ಮುಕ್ತ ನಗರವನ್ನಾಗಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ತಹಸೀಲ್ದಾರ್​ ಗರೀಶ್​ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net