

ಕಡೂರು: ಉಳುಮೆ ಮಾಡುವ ಭೂಮಿಗೆ ಅತಿಯಾದ ರಸಗೊಬ್ಬರ ಬಳಸುವುದರಿಂದ ಭೂಮಿಯಲ್ಲಿ ಮಣ್ಣಿನ ಸತ್ವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ, ಕೃಷಿ ಉತ್ಪನ್ನಗಳ ಸಂಸ್ಕೃರಣೆ ಹಾಗೂ ರಫ್ತು ನಿಗಮ ನಿಯಮಿತ, ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪೂರ್ವಿಕರು ಕೃಷಿ ಬದುಕಿಗೆ ಹೆಚ್ಚು ಒತ್ತು ನೀಡಿ ಸಾವಯುವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕೃಷಿ ಪದ್ದತಿ ವಿಧಾನ ಬದಲಾಗಿ ಮಣ್ಣಿಗೆ ರಾಸಾಯನಿಕ ಗೊಬ್ಬರ ಬಳಸಿ ಮಣ್ಣಿನ ಸತ್ವ ಕಾಪಾಡುವ ಎರೆಹುಳು ಇಲ್ಲದಂತೆ ಬೇಸಾಯ ಮಾಡುವುದದನ್ನು ರೈತರು ಕೈ ಬಿಟ್ಟು ಭೂಮಿ ಫಲವತ್ತತೆ ಕಾಯ್ದುಕೊಳ್ಳುವ ಸಾವಯುವ ಕೃಷಿಗೆ ಆದ್ಯತೆ ನೀಡಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚು ಪ್ರೋತ್ಸಾಹದ ಅಗತ್ಯವಿದೆ. ಪೂರ್ವಿಕರ ಕೃಷಿ ಪದ್ದತಿಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜು ಹಂತಗಳಲ್ಲಿ ಬೇಸಾಯ ಬದುಕಿನ ಕುರಿತು ಪ್ರಾತ್ಯಕ್ಷಿಕೆಗಳು ಹೆಚ್ಚು ನಡೆದಾಗ ಮಕ್ಕಳಲ್ಲೂ ಸಾಂಪ್ರದಾಯಿಕ ಕೃಷಿ ಬಗ್ಗೆ ಪರಿಚಯಿಸಿ ಕೊಡಲು ಸಾಧ್ಯವಾಗಲಿದೆ ಎಂದರು.