

ಮಡಿಕೇರಿ: ಮಕ್ಕಳ ಜೀವ ಮತ್ತು ಜೀವನ ಅತೀ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಮಕ್ಕಳ ಸಂರಕ್ಷಣೆ ಮಾಡುವತ್ತ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಬದುಕನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ’ಮಕ್ಕಳ ಪೋಷಣೆ ಮತ್ತು ರಕ್ಷಣೆ, ಪೋಕ್ಸೋ ಕಾಯ್ದೆ ಅನುಷ್ಠಾನ ಮತ್ತಿತರ ಸಂಬಂಧ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ಪ್ರತಿಯೊಬ್ಬರಲ್ಲಿಯೂ ಎಚ್ಚರ ವಹಿಸಬೇಕು. ಮಕ್ಕಳನ್ನು ಯಾವುದೇ ಕೆಲಸ ಕಾರ್ಯಗಳಿಗೆ ತೊಡಗಿಸಿಕೊಳ್ಳದೆ ಆಟ, ಪಾಠ, ಸಂಗೀತ, ಸಾಹಿತ್ಯ ಹೀಗೆ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತಾಗಲು ಪ್ರೇರೇಪಿಸಬೇಕು. ಅದನ್ನು ಬಿಟ್ಟು ನಿರ್ಬಂಧಗಳನ್ನು ಹೇರಬಾರದು ಎಂದು ಸಲಹೆ ಮಾಡಿದರು.
ತಾಯಂದಿರು ಪೌಷ್ಠಿಕ ಆಹಾರ ಪಡೆಯುವತ್ತ ಗಮನಹರಿಸಬೇಕು. ಮಕ್ಕಳ ಜೀವ ಮತ್ತು ಜೀವನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಎಲ್ಲಾ ಹಂತದ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸಿ, ಮಕ್ಕಳ ಸಂರಕ್ಷಣೆಗೆ ಮುಂದಾಗಬೇಕು. ಮಕ್ಕಳ ಆರೋಗ್ಯ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಮಕ್ಕಳ ಪಾಲನೆ ಮತ್ತು ಪೋಷಣೆ ಜತೆಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸಂಪನ್ಮೂಲ ಸೌಲಭ್ಯಗಳು ತಲುಪಬೇಕು ಎಂದರು.
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ನೆಮ್ಮದಿಯ ಸಮಾಜ ನಿರ್ಮಾಣಕ್ಕೆ ಸಂಸ್ಕಾರಯುತ ಬದುಕು ಅಗತ್ಯ. ಮಕ್ಕಳಿಗೆ ಅರಿವು, ಜ್ಞಾನ ನೀಡುವುದರ ಜತೆಗೆ ಕ್ರಿಯಾಶೀಲ ಪ್ರಜ್ಞೆ ಬರುವಂತೆ ನಡೆದುಕೊಳ್ಳಬೇಕು. ಬಾಲ್ಯ ವಿವಾಹ ನಡೆಯದಂತೆ ನೋಡಿಕೊಳ್ಳಬೇಕು. ಹಾಡಿಗಳಲ್ಲಿ ಮಕ್ಕಳ ಸಂರಕ್ಷಣೆ ಸಂಬಂಧಿಸಿದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಕೌನ್ಸಿಲಿಂಗ್ ಮೂಲಕ ಮಕ್ಕಳ ಕ್ರೀಯಾಶೀಲ ಚಟುವಟಿಕೆಗೆ ಒತ್ತು ನೀಡಬೇಕು ಎಂದು ವಿವರಿಸಿದರು.
ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಬೇಕು. ಮಕ್ಕಳ ಹಕ್ಕು ಸಂರಕ್ಷಣೆ ಜತೆಗೆ ಕರ್ತವ್ಯದ ಬಗ್ಗೆಯೂ ಮಾಹಿತಿ ನೀಡಬೇಕು. ಮಕ್ಕಳ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಶಾಲಾ ಶಿಕ್ಷಣ ಮತ್ತು ಶಾಲಾ ಕಾಲೇಜು ಆವರಣದಲ್ಲಿ ಕೋಟ್ಪಾ ನಿಯಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆ. ಮಕ್ಕಳ ಬೆಳವಣಿಗೆಗೆ ಕುಟುಂಬದಲ್ಲಿ ಉತ್ತಮ ವಾತಾವರಣ ಇರಬೇಕು. ಪೋಷಕರು ಮೊಬೈಲ್ ನೋಡಿದರೆ ಮಕ್ಕಳು ಅದನ್ನು ಅನುಸರಿಸುತ್ತಾರೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು. ಕೊಡಗು ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಉತ್ತಮವಾಗಿದ್ದರೂ ಸಹ ಹಾಡಿಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಮಾತನಾಡಿ, ಬಾಲ್ಯ ವಿವಾಹ ತಡೆಯಬೇಕಿದೆ. ಪೋಕ್ಸೋ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಸಂಬಂಧಿಸಿದಂತೆ ಕಾನೂನಿನ ಬಗ್ಗೆ ಅರಿವಿರಬೇಕು. ಭಯ ಇದ್ದಲ್ಲಿ ದೌರ್ಜನ್ಯ ಕಂಡು ಬರುವುದಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಅಗತ್ಯ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಬೇಕು. ಮಕ್ಕಳನ್ನು ಹೆದರಿಸುವುದಕ್ಕಿಂತ ಸಲಹೆ ಮಾರ್ಗದರ್ಶನ ಮಾಡಬೇಕು ಎಂದರು.
ಕಾರ್ಮಿಕ ಇಲಾಖಾ ಅಧಿಕಾರಿ ಅನಿಲ್ ಬಗಟಿ ಮಾಯನಾಡಿ, ಜಿಲ್ಲೆಯಲ್ಲಿ ೫ ಬಾಲ ಕಾರ್ಮಿಕ ಮತ್ತು ಮೂವರು ಕಿಶೋರ ಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಬಳಿಕ ಸರ್ಕಾರಿ ಬಾಲ ಮಂದಿರಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸೂರಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ವಿ.ಸುರೇಶ್, ಶ್ರೀಶೈಲ ಬೀಳಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಬಿಸಿಎಂ ಇಲಾಖೆ ಅಧಿಕಾರಿ ಎನ್.ಮಂಜುನಾಥ್, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಇತರರಿದ್ದರು.