ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಅನುದಾನ ನೀಡಿ

IMG-20230212-WA0003
Published on

ಮೈಸೂರು: ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಪರಿಶಿಷ್ಟ ಪಂಗಡದಲ್ಲಿ ಸುಮಾರು 52 ಬುಡಕಟ್ಟುಗಳು ಸೇರಿ ಸುಮಾರು 65 ಲಕ್ಷ ಜನಸಂಖ್ಯೆ ಹೊಂದಿದ್ದು, ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವ ಸಮುದಾಯವಾಗಿದೆ. ಆದ್ದರಿಂದ ಹೆಚ್ಚಿನ ಅನುದಾನವನ್ನು ನೀಡುವುದರ ಮುಖಾಂತರ ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ವೇದಿಕೆಯ ಅಧ್ಯಕ್ಷ ದ್ಯಾವಪ್ಪನಾಯಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೀಡುವ ನೇರ ಸಾಲವನ್ನು 50,000 ರೂ.ಗಳಿಂದ 3,00,000 ರೂ.ಗಳವರೆಗೆ ಹೆಚ್ಚಳ ಮಾಡಬೇಕು. ವಾಲ್ಮೀಕಿ ನಿಗಮದಿಂದ ನೀಡುವ ಗಂಗಾಕಲ್ಯಾಣ ಯೋಜನೆಯಡಿ ಫಲಾನುಭವಿಗಳ ಸಂಖ್ಯೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ 50ಕ್ಕೆ ಹೆಚ್ಚಳ ಮಾಡಬೇಕು. ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಬೇಕು. ವಿದ್ಯಾರ್ಥಿಗಳಿಗೆ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಬೇಕು. ಮೈಸೂರು ನಗರದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 50 ಲಕ್ಷ ರೂ.ವರೆಗೆ ಮೀಸಲಿದ್ದು, ಅದನ್ನು 1 ಕೋಟಿ ರೂ.ವರೆಗೆ ಹೆಚ್ಚಳ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಹಾಯಧನದ ಸಾಲವನ್ನು ನೀಡಲು ವಿಳಂಬ ಮಾಡುವುದರಿಂದ ಸಹಕಾರ ಸಂಘಗಳ ಮೂಲಕ ಸಹಾಯಧನದ ಸಾಲವನ್ನು ನೀಡುವಂತೆ ಘೋಷಣೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಹೆಚ್ಚುವರಿಯಾಗಿ ಒಂದು ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ಪುರುಷ ವಿದ್ಯಾರ್ಥಿನಿಲಯವನ್ನು ತೆರೆಯುವಂತೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟಜಾತಿ ಮತ್ತು ಪಂಗಡದ ಬ್ಯಾಕ್ ಲಾಗ್ ಹುದ್ದೆ ಭರ್ತಿ ಘೋಷಣೆ ಮಾಡಬೇಕು. ಹೊಸದಾಗಿ ಸ್ಥಾಪನೆ ಮಾಡುತ್ತಿರುವ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರನ್ನು ನಾಮಕರಣ ಮಾಡುವುದು ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಗೊಂಡಿರುವ ವಾಲ್ಮೀಕಿ ಅಧ್ಯಯನ ಪೀಠವನ್ನು ಮಾನಸ ಗಂಗೋತ್ರಿ ಆವರಣದಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು. ವೇದಿಕೆಯ ಪದಾಧಿಕಾರಿಗಳಾದ ರೈಲ್ವೆ ಸಿದ್ದಯ್ಯ, ವೆಂಕಟೇಶ್ ನಾಯಕ, ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net