

ಮೂಡಿಗೆರೆ: ಸರ್ಕಾರ ಅತಿವೃಷ್ಟಿ ಪೀಡಿತ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ತಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.
ಕುನ್ನಳ್ಳಿ, ಪಟ್ಟದೂರು, ಬಿನ್ನಡಿ, ಹಂತೂರು, ಊರುಬಗೆ, ದೇವವೃಂದ, ತ್ರಿಪುರ, ಬೈದುವಳ್ಳಿ ಮತ್ತಿತರ ಗ್ರಾಮಗಳಲ್ಲಿ ಶುಕ್ರವಾರ ಮಳೆ ಹಾನಿ ವೀಕ್ಷಿಸಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ., ಭಾಗಶಃ ಹಾನಿಯಾದ ಮನೆಗಳಿಗೆ 1 ಲಕ್ಷ ರೂ., ವಾಸ್ತವ್ಯದ ವೆಚ್ಚಕ್ಕಾಗಿ 10 ಸಾವಿರ ರೂ. ನೀಡಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ. ಮಳೆಯಿಂದ ಬೀದಿಗೆ ಬಿದ್ದ ಸಂತ್ರಸ್ತರನ್ನು ಇದುವರೆಗೂ ಗಮನಿಸಿಲ್ಲ. ವಾಲ್ಮೀಕಿ ಮತ್ತು ಮುಡಾ ಹಗರಣಗಳನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಬೆಂಗಳೂರಿನಿಂದ ಹೊರಗೆ ಬಂದಿಲ್ಲ. ಅತಿವೃಷ್ಟಿಯಿಂದ ಜಮೀನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ. ಮಳೆಯಿಂದ ಕೂಲಿ ಕೆಲಸವಿಲ್ಲದೆ ಕಾರ್ಮಿಕರೂ ಕಂಗೆಟ್ಟಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರ ಗೋಳು ಕೇಳುವವರೇ ಇಲ್ಲ. ರೈತರಿಗೆ ಬೆಳೆ ನಷ್ಟದ ಪರಿಹಾರ ಇದುವರೆಗೂ ನೀಡಿಲ್ಲ. ಮಲೆನಾಡು ಭಾಗದಲ್ಲಿ ಅನಾವೃಷ್ಟಿಯ ಪರಿಹಾರದ ಹಣವನ್ನು ರೈತರಿಗೆ ಇದುವರೆಗೂ ವಿತರಿಸಿಲ್ಲ. ಕಾಫಿಗೆ ಕೊಳೆ ರೋಗ ಬಂದಿದೆ. ಕಾಳುಮೆಣಸು ಫಸಲು ನೆಲ ಕಚ್ಚಿದೆ. ಅತಿವೃಷ್ಟಿ ನಿಭಾಯಿಸಲು ಅತಿ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಸಂತ್ರಸ್ತರಿಗೆ ನೆರವಾಗಬೇಕು ಎಂದು ಹೇಳಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಮಲೆನಾಡು ಭಾಗದ ರೈತರ ಪಹಣಿಯಲ್ಲಿ ಬೆಳೆ ಕಾಲಂ ಬರುತ್ತಿಲ್ಲ. ಇದರಿಂದಾಗಿ ರೈತರ ಬೆಳೆ ವಿಮೆ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ರೈತರು ಈ ಕೆಲಸಕ್ಕಾಗಿ ಪ್ರತಿದಿನ ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ವಿಮೆ ಕಂತು ಪಾವತಿಸುವ ಗಡುವು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಹಳೇ ಮೂಡಿಗೆರೆ ಗ್ರಾಪಂ ಅಧ್ಯಕ್ಷೆ ರಂಜಿತಾ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ, ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಉಪಾಧ್ಯಕ್ಷ ಸುನೀಲ್ ನಿಡಗೋಡು, ಮುಖಂಡರಾದ ಪ್ರಶಾಂತ್, ಧನಿಕ್ ಕೂಡುದಿಣ್ಣೆ, ಪಂಚಾಕ್ಷರಿ, ಪರೀಕ್ಷಿತ್ ಜಾವಳಿ ಇತರರಿದ್ದರು.