ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿ

30 mlv 3
ಮಳವಳ್ಳಿ ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹತ್ತನೆ ತರಗತಿ ವಿದ್ಯಾರ್ಥಿಗಳು ಮತ್ತು ಪಾಲಕರ ಸಭೆಯನ್ನು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಶ್ರೀನಿವಾಸ್ ಉದ್ಘಾಟಿಸಿದರು. ಎಚ್.ಎಂ.ನಾಗೇಂದ್ರಮೂರ್ತಿ, ಸೋಮಣ್ಣ, ಬಿ.ಎಂ.ಮಹೇಶ್, ಸಂಜಯ ಮುರಳಿ, ಮಲ್ಲಿಕಾರ್ಜುನ, ಪೂರ್ಣಿಮಾ, ಚಂದ್ರಪ್ರಭಾ, ಅಣ್ಣಯ್ಯ, ಪ್ರಕಾಶ್, ಗುಂಡಪ್ಪ, ಜಯಮ್ಮ, ಸುನಂದ, ಮಮತಾ ಇದ್ದರು.
Published on

ಮಳವಳ್ಳಿ: ಭವಿಷ್ಯತ್ತಿಗೆ ಭದ್ರ ಬುನಾದಿ ಹಾಕಿಕೊಡುವ ಪರೀಕ್ಷಾ ದಿನಗಳು ಸಮೀಪಿಸುತ್ತಿರುವುದರಿಂದ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದರು. ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಗಳಿಸಲು ಸಾಧ್ಯವಿದ್ದು, ವ್ಯಾಸಂಗದ ದಿನಗಳಲ್ಲಿ ವಿದ್ಯಾರ್ಥಿಗಳು ಮನಸ್ಸನ್ನು ಚಂಚಲತೆಗೆ ಒಳಗಾಗದಂತೆ ಹತೋಟಿಯಲ್ಲಿರಿಸಿಕೊಂಡು ಏಕಾಗ್ರತೆಯಿಂದ ಪಠ್ಯ ವಿಷಯಗಳನ್ನು ಅಭ್ಯಾಸ ಮಾಡಿಕೊಳ್ಳುವಂತೆ ಕರೆ ನೀಡಿದರು.

ಪರೀಕ್ಷೆಗೆ ಕೇವಲ 50 ದಿನಗಳು ಮಾತ್ರ ಉಳಿದಿದೆ. ಒತ್ತಡಕ್ಕೆ ಒಳಗಾಗದೇ ಉಳಿದಿರುವ ದಿನಗಳಲ್ಲಿ ಪಠ್ಯಪುಸ್ತಕಗಳಲ್ಲಿನ ವಿಷಯಗಳನ್ನು ಮನನ ಮಾಡಿಕೊಂಡು ವಿದ್ಯಾರ್ಥಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಿ ಎಂದ ಅವರು, ಶಾಲೆಯಲ್ಲಿ ಶಿಕ್ಷಕರು ವಿಷಯವಾರು ಪಠ್ಯಕ್ರಮಗಳ ಬಗ್ಗೆ ಮಕ್ಕಳಿಗೆ ಈಗಾಗಲೇ ಎಲ್ಲ ರೀತಿಯಲ್ಲಿ ತರಬೇತಿಯ ಜತೆಗೆ ಪರೀಕ್ಷಾ ಸಿದ್ಧತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದ್ದಾರೆ. ಇವುಗಳ ಜತೆಗೆ ಪಾಲಕರ ಸಹಕಾರವು ಅತ್ಯಗತ್ಯವಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಾಯಂದಿರು ಕೆಲ ದಿನಗಳವರೆಗೆ ಮನೆಗಳಲ್ಲಿ ಟಿವಿ ಧಾರಾವಾಹಿಗಳ ವೀಕ್ಷಣೆ ಮಾಡುವುದನ್ನು ನಿಲ್ಲಿಸುವ ಮೂಲಕ ಅವರ ಓದಿಕೊಳ್ಳಲು ಪ್ರಶಾಂತವಾದ ವಾತಾವರಣ ಕಲ್ಪಿಸಿಕೊಡುವಂತೆ ಸಭೆಯಲ್ಲಿ ಹಾಜರಿದ್ದ ಪಾಲಕರಿಗೆ ಕಿವಿಮಾತು ಹೇಳಿದರು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದಿಂದ ಸಾಧನೆ ಮಾಡಿರುವ ವ್ಯಕ್ತಿಗಳ ಬಗ್ಗೆ ತಿಳಿಸಿಕೊಟ್ಟು ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡುವಂತೆಯೂ ಹುರಿದುಂಬಿಸಬೇಕು ಎಂದರು.

ಸಭೆಯಲ್ಲಿ ಮುಖ್ಯ ಶಿಕ್ಷಕ ಎಚ್.ಎಂ.ನಾಗೇಂದ್ರಮೂರ್ತಿ, ಪಿಆರ್‌ಪಿ ಸೋಮಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಂ.ಮಹೇಶ್, ಸದಸ್ಯರಾದ ಸಂಜಯ ಮುರಳಿ, ಮಲ್ಲಿಕಾರ್ಜುನ, ಪೂರ್ಣಿಮಾ, ಗ್ರಾಪಂ ಸದಸ್ಯೆ ಚಂದ್ರಪ್ರಭಾ, ಶಿಕ್ಷಕರಾದ ಅಣ್ಣಯ್ಯ, ಪ್ರಕಾಶ್, ಗುಂಡಪ್ಪ, ಜಯಮ್ಮ, ಸುನಂದಾ, ಮಮತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net