ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ

19 HANUR 1
ಹನೂರು ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ದಾಸ್ತಾನು ಕೊಠಡಿಯನ್ನು ಎಸಿಎಫ್ ವಿರಾಜ್ ಹೊಸೂರ್ ಉದ್ಘಾಟಿಸಿದರು. ಚಂದ್ರಪ್ಪ, ಕರಿಯಪ್ಪ, ದೊಡ್ಡವೀರಶೆಟ್ಟಿ ಇತರರು ಇದ್ದರು.
Published on

ಹನೂರು: ಕಿರು ಉತ್ಪನ್ನಗಳನ್ನು ಸಂಗ್ರಹಿಸುವುದರ ಜತೆಗೆ ಪ್ರತಿಯೊಬ್ಬರೂ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರೂ ಆದ ಎಸಿಎಫ್ ವಿರಾಜ್ ಹೊಸೂರ್ ತಿಳಿಸಿದರು.

ಪಟ್ಟಣದ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಅರಣ್ಯ ಮನುಕುಲದ ಸಂಪತ್ತು. ಅರಣ್ಯ ಸಮೃದ್ಧಿಯಿಂದ ಕೂಡಿದ್ದರೆ ಪರಿಸರದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದರ ಜತೆಗೆ ಉತ್ತಮ ಆರೋಗ್ಯ ಹೊಂದಬಹುದು. ಆದ್ದರಿಂದ ಪ್ರತಿಯೊಬ್ಬರೂ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಇನ್ನು ಗಿರಿಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಸಲುವಾಗಿ ಇಲಾಖೆ ನೆಲ್ಲಿಕಾಯಿ, ಜೇನುತುಪ್ಪ, ಇನ್ನಿತರ ಅರಣ್ಯ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಿದೆ. ಆದ್ದರಿಂದ ಗಿರಿಜನರು ಇದರ ಪ್ರಯೋಜನ ಪಡೆದುಕೊಂಡು ಲ್ಯಾಂಪ್ಸ್ ಸೊಸೈಟಿಯ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಕಿರು ಉತ್ಪನ್ನ ಸಂಗ್ರಹಿಸಿ: ಸಂಘದ ಉಪಾಧ್ಯಕ್ಷ ಮಾವತ್ತೂರು ಚಂದ್ರಪ್ಪ ಮಾತನಾಡಿ, ಗಿರಿಜನರು ಈ ಹಿಂದೆ ಅರಣ್ಯ ಕಿರು ಉತ್ಪನ್ನಗಳನ್ನು ಹೆಚ್ಚು ಸಂಗ್ರಹಿಸುತ್ತಿದ್ದರು. ಇದರಿಂದ ಜನರು ಹಾಗೂ ಸಂಘಕ್ಕೂ ಉತ್ತಮ ಆದಾಯ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಿರು ಉತ್ಪನ್ನಗಳನ್ನು ಸಂಗ್ರಹಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ಆದಾಯ ಕಡಿಮೆಯಾಗುತ್ತಿದೆ. ಜತೆಗೆ ಸಮುದಾಯವು ಅಭಿವೃದ್ಧಿ ಹೊಂದಲು ಸಹ ತೊಡಕಾಗಿ ಪರಿಣಮಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಕಿರು ಉತ್ಪನ್ನಗಳ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಖರ್ಚು ವೆಚ್ಚದ ವಾರ್ಷಿಕ ವರದಿ ಮಂಡಿಸಲಾಯಿತು. ಇದಕ್ಕೂ ಮುನ್ನ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 2 ದಾಸ್ತಾನು ಕೊಠಡಿಯನ್ನು ಉದ್ಘಾಟಿಸಲಾಯಿತು.

ಸಂಘದ ನಿರ್ದೇಶಕರಾದ ಕರಿಯಪ್ಪ, ಗಿರಿಯ, ಪಂದೇಗೌಡ, ಪುಟ್ಟಮಾದ, ಸಿದ್ದಮರಿ, ಪ್ರಕಾಶ್, ಮಾದೇವ, ಮುನಿಮಾದಮ್ಮ, ರತ್ನಮ್ಮ, ಸಂಘದ ಸಿಇಒ ದೊಡ್ಡವೀರಶೆಟ್ಟಿ, ನೌಕರ ಮಹದೇವಪ್ರಭು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net