ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ

16 HANUR 2 A
Published on


ಚಾಮರಾಜನಗರ: ಕೌಟುಂಬಿಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಶಿಕ್ಷಣ ಕಲ್ಪಿಸಬೇಕು ಎಂದು ಮುಖ್ಯ ಶಿಕ್ಷಕಿ ವಿಜಯ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿಣಾವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ಧ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.


ಹೆಣ್ಣು ತ್ಯಾಗ ಹಾಗೂ ಶಕ್ತಿಯ ಸಂಕೇತ. ಈ ದಿಸೆಯಲ್ಲಿ ಮಕ್ಕಳನ್ನು ಪೋಷಣೆ ಹಾಗೂ ಆರೈಕೆ ಮಾಡುವುದರ ಜತೆಗೆ ಸತ್ಪ್ರಜೆಯಾಗಿ ರೂಪಿಸುವಲ್ಲಿ, ದೇಶವನ್ನು ಕಟ್ಟುವಲ್ಲಿ ಮಹಿಳೆಯರ ಪಾತ್ರ ಅಪಾರ. ದೇಶದ ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಚಾ.ನಗರ ಜಿಲ್ಲೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರು ಮಹಿಳೆಯರಾಗಿದ್ದು, ಸ್ಫೂರ್ತಿದಾಯಕ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.


ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಬೇಕು. ಜತೆಗೆ ಇತ್ತೀಚಿನ ವರ್ಷಗಳಲ್ಲಿ ಭ್ರೂಣಹತ್ಯೆ ಹಾಗೂ ಶಿಶುಹತ್ಯೆಯಿಂದಾಗಿ ಮಹಿಳೆಯರ ಲಿಂಗಾನುಪಾತ ಕಡಿಮೆಯಾಗುತ್ತಿದೆ. ಹಾಗಾಗಿ ಇದನ್ನು ತಡೆಗಟ್ಟಬೇಕು. ಮಹಿಳೆಯರಿಗಾಗಿ ಸರ್ಕಾರ ಜಾರಿಗೆ ತಂದಿರುವ ಸುಕನ್ಯ ಸಮೃದ್ಧಿ, ನಾರಿಶಕ್ತಿ, ಪ್ರಧಾನಮಮಂತ್ರಿ ಉಜ್ವಲ ಯೋಜನೆ ಹಾಗೂ ಇನ್ನಿತರ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು. ಈ ದಿಸೆಯಲ್ಲಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಸ್ವಸಹಾಯ ಸಂಘವನ್ನು ತೆರೆದು ಉಳಿತಾಯದ ಮನೋಭಾವನೆಯನ್ನು ಬೆಳೆಸಿರುವುದು ಮೆಚ್ಚುಗೆಯ ಸಂಗತಿ ಎಂದು ತಿಳಿಸಿದರು.


ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಜೇಂದ್ರ ಹಾಗೂ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ ಮಾತನಾಡಿದರು. ಬಳಿಕ ಜ್ಞಾನ ವಿಕಾಸ ಸದಸ್ಯರಿಂದ ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನ ಬಿಂದು, ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್, ಜನಜಾಗೃತಿ ವೇದಿಕೆ ಸದಸ್ಯ ಪ್ರಕಾಶ್‌ನಾಯ್ಡು, ರಾಚಪ್ಪ ಹಾಗೂ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net