

ಹನೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳನ್ನು ತಿಳಿಸಿಕೊಡುತ್ತಿರುವ ಗೌತಮ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಂ.ಆರ್.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರ ಜತೆಗೆ ಮೌಲ್ಯಯುತ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಬೇಕಿದೆ. ಇದರಿಂದ ವಿದ್ಯಾರ್ಥಿಗಳು ಸಂಸ್ಕಾರ ಕಲಿಯುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಈ ದಿಸೆಯಲ್ಲಿ ಗೌತಮ್ ಶಿಕ್ಷಣ ಸಂಸ್ಥೆ ಮುಂದಿರುವುದು ಮೆಚ್ಚುಗೆಯ ಸಂಗತಿ ಎಂದರು.
ಬಿಇಒ ಶಿವರಾಜು ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗೌತಮ್ ಶಾಲೆ ಹೆಚ್ಚಿನ ಒತ್ತು ನೀಡಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಗಮನ ಸೆಳೆದಿದೆ ಎಂದು ಹೇಳಿದರು.
ಇದೇ ವೇಳೆ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಹಿತಿ ಹನೂರು ಚೆನ್ನಪ್ಪ, ಗೌತಮ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾವುಕಯ್ಯ, ಕಾರ್ಯದರ್ಶಿ ರವೀಂದ್ರ, ನಿವೃತ್ತ ವಿಜ್ಞಾನಿ ಡಾ.ಚನ್ನಕೇಶವಮೂರ್ತಿ, ಅಜ್ಜೀಪುರ ಗ್ರಾಪಂ ಅಧ್ಯಕ್ಷ ರುದ್ರನಾಯ್ಕ, ಮಂಗಲ ಗ್ರಾಪಂ ಅಧ್ಯಕ್ಷೆ ಉಮಾ ಇತರರು ಇದ್ದರು.