

ಕಿಕ್ಕೇರಿ: ಪಂಚೇಂದ್ರಿಯಗಳಲ್ಲಿ ಮುಖ್ಯವಾದ ಅಂಗ ಕಣ್ಣಿನ ಆರೈಕೆಗೆ ಸದಾ ಎಚ್ಚರಿಕೆ ಅಗತ್ಯ ಎಂದು ಚನ್ನರಾಯಪಟ್ಟಣದ ಶಿವಪ್ರಸಾದ್ ನೇತ್ರ ಚಿಕಿತ್ಸಾಲಯದ ಶಾಖಾ ವ್ಯವಸ್ಥಾಪಕ ಜಿ.ಎನ್.ಮಂಜುನಾಥ್ ಸಲಹೆ ನೀಡಿದರು.
ಇಲ್ಲಿನ ಕೆಪಿಎಸ್ ಶಾಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಓದಿಗಿಂತ ಹೆಚ್ಚು ಮೊಬೈಲ್‌ನಲ್ಲಿ ಕಾಲ ಕಳೆಯುವುದರಿಂದ ಕಣ್ಣಿನ ಕಾರ್ಯನಿರ್ವಹಣಾ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತಿದೆ. ಜತೆಗೆ ಮೊಬೈಲ್ ಹೆಚ್ಚು ನೋಡುವುದರಿಂದ ಮನಸ್ಸು ಮತ್ತು ದೇಹದ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಅಲ್ಲದೆ ಮಬ್ಬು ಕತ್ತಲೆಯ ಓದು ಕೂಡ ಕಣ್ಣಿನ ಮೇಲೆ ಹೆಚ್ಚು ಒತ್ತಡ ಬೀಳಲು ಕಾರಣವಾಗಲಿದೆ ಎಂದು ಮಾಹಿತಿ ನೀಡಿದರು.
ಓದಿನ ನಡುವೆ ವಿರಾಮವಿರಲಿ. ಕಣ್ಣಿನ ಹಲವು ವ್ಯಾಯಾಮ ಮಾಡಿ. ಆಗಿಂದಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ. ಕಣ್ಣಿಗೆ ಸಣ್ಣಧೂಳಿನಂತಹ ವಸ್ತು ಬಿದ್ದರೆ ಯಾವುದೇ ಮುಲಾಮು ಹಚ್ಚಿಕೊಳ್ಳದೆ, ಸ್ವಯಂಚಿಕಿತ್ಸೆ ಮಾಡಿಕೊಳ್ಳದಿರಿ. ಕಣ್ಣಿನ ಯಾವುದೇ ಸಮಸ್ಯೆ ಕಾಡಿದರೂ ಕೂಡಲೇ ನೇತ್ರ ವೈದ್ಯರನ್ನು ಕಾಣಬೇಕು. ಉದಾಸೀನ ತೋರಿದರೆ ಕಣ್ಣಿಗೆ ಹಾನಿಯಾಗಬಹುದು ಎಂದು ಎಚ್ಚರಿಸಿದರು. ಮರಣ ನಂತರ ನೇತ್ರದಾನ ಮಾಡುವುದರಿಂದ ಎರಡು ಅಮೂಲ್ಯ ಜೀವಗಳು ಬಾಹ್ಯಲೋಕವನ್ನು ಕಾಣುವಂತೆ ಮಾಡಬಹುದು ಎಂದರು.
ವಿದ್ಯಾರ್ಥಿಗಳು, ಬೋಧಕ ವೃಂದ ಸೇರಿದಂತೆ ವಿವಿಧ ವಯೋಮಾನದ 200ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆಗೆ ಒಳಗಾದರು. ಪ್ರಾಂಶುಪಾಲ ಎನ್.ದೊರೆಸ್ವಾಮಿ, ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಉಪನ್ಯಾಸಕ ಎ.ರವೀಂದ್ರ, ಎ.ಎಂ. ಮಂಜುನಾಥ್, ಎನ್.ಎ. ನಾಗೇಶ್, ರಮೇಶ್, ವರಲಕ್ಷ್ಮೀ, ಚಂದ್ರಿಕಾ, ಫಾಜಿಲ್ಲಾ ಖಾನಂ, ನೇತ್ರ ಪರಿವೀಕ್ಷಕರಾದ ಪೂಜಾ, ಡಯಾನ, ಮಂಜು ಮತ್ತಿತರರಿದ್ದರು.