

ಮಡಿಕೇರಿ: ಮಕ್ಕಳ ಪೋಷಣೆ ಮತ್ತು ರಕ್ಷಣೆ(ಬಾಲ ನ್ಯಾಯ ಕಾಯ್ದೆ) ಸಂಬಂಧಿಸಿದಂತೆ ಮಾಹಿತಿ ಶಿಕ್ಷಣ, ಮಾರ್ಗದರ್ಶನದ ಮೂಲಕ ಹೆಚ್ಚಿನ ಜಾಗೃತಿ ಮೂಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಹಾಗೂ ರಕ್ಷಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಹಾಡಿಗಳಲ್ಲಿ, ಲೈನ್ ಮನೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಹೆಚ್ಚಿನ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು. ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಎಲ್ಲೆಡೆ ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು.
ಬಾಲನ್ಯಾಯ ಕಾಯ್ದೆಯ ವಿಶೇಷ ಪಾಲನೆಯಡಿ ೧೮ ವರ್ಷದೊಳಗಿನ ಮಕ್ಕಳ ವಿಶೇಷ ಪಾಲನೆ ಯೋಜನೆ ಜಾರಿಗೆ ಬಂದಿದೆ. ತಂದೆ ತಾಯಂದಿರು ಎಚ್‌ಐವಿ ರೋಗಕ್ಕೆ ತುತ್ತಾಗಿ ಮರಣ ಹೊಂದಿದ್ದಲ್ಲಿ ಅಥವಾ ಮಕ್ಕಳನ್ನು ನೋಡಿಕೊಳ್ಳಲು ಅಸಕ್ತರಾಗಿದ್ದರೆ ಅಂತಹ ಮಕ್ಕಳ ಪಾಲನೆ ಮತ್ತು ಪೋಷಣೆ ಸಂಬಂಧ ಅಗತ್ಯ ಗಮನಹರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಈರಸ್ವಾಮಿ ಮಾತನಾಡಿ, ವಿಶೇಷ ಪಾಲನೆ ಯೋಜನೆಯಡಿ ಕಳೆದ ಮೂರು ತಿಂಗಳಲ್ಲಿ ೧೩೭ ಮಕ್ಕಳ ಪೋಷಕರಿಗೆ ೮.೧೬ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ವರ್ಷದೊಳಗೆ ಅನಾಥ ಹಾಗೂ ಏಕಪೋಷಕ ಮಕ್ಕಳಿಗೆ ಹಾಗೂ ಸಜಾ ಖೈದಿಗಳ ಮಕ್ಕಳಿಗೆ ಮಾಸಿಕ ೪ ಸಾವಿರ ರೂ.ನಂತೆ ಫಲಾನುಭವಿಯ ಖಾತೆಗೆ ಅನುದಾನವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ೨೦೪ ಫಲಾನುಭವಿಗಳಿಗೆ ೨೪.೪೪ ಲಕ್ಷ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆಯಡಿ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೧೪೪ ಫಲಾನುಭವಿ ಮಕ್ಕಳಿಗೆ ಮಾಹೆಯಾನ ೪೦೦೦ ರೂ.ಗಳಂತೆ ಒಟ್ಟು ೩೩,೦೮,೦೦೦ ರೂ.ಗಳನ್ನು ಡಿಬಿಟಿ ಮೂಲಕ ಬಿಡುಗಡೆಗೊಳಿಸಲಾಗಿದೆ. ದತ್ತು ಕಾರ್ಯಕ್ರಮದಡಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ೬ ಮಕ್ಕಳು ದಾಖಲಾಗಿದ್ದಾರೆ ಎಂದು ತಿಳಿಸಿದರು.
ಬಾಲ್ಯ ವಿವಾಹ ಸಂಬಂಧಿಸಿದಂತೆ ಮಾಹಿತಿ ನೀಡಿದ ಈರಸ್ವಾಮಿ ಅವರು, ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಬಾಲ್ಯವಿವಾಹ ಸಂಬಂಧ ೭ ದೂರುಗಳು ಸಲ್ಲಿಕೆಯಾಗಿದ್ದು, ಮೂರು ಬಾಲ್ಯವಿವಾಹವನ್ನು ತಡೆಯಲಾಗಿದೆ. ೪ ಬಾಲ್ಯ ವಿವಾಹಗಳು ನಡೆದಿದ್ದು, ಈ ೪ ಪ್ರಕರಣಗಳ ಸಂಬಂಧ ಕಾನೂನು ಉಲ್ಲಂಘಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಾಲಕಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ೭೫ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೬೫ ಪ್ರಕರಣಗಳು ಇತ್ಯರ್ಥಗೊಂಡಿದ್ದು, ೧೦ ಪ್ರಕರಣಗಳು ಬಾಕಿ ಇವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಿವರಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿಶೇಷ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜೊತೆ ಸೇರಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ನಟರಾಜು, ಜಿ.ಪಂ ಉಪ ಕಾರ್ಯದರ್ಶಿ ಅಬ್ದುಲ್ ನಬಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ.ಕವಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಶಿರಾಜ್ ಇತರರು ಇದ್ದರು.