

ಮುಂಡಗೋಡ: ರೋಗಿಗಳಿಗೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ಹೊರಗೆ ಬರೆದುಕೊಡಬಾರದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿಯ ತಾಲೂಕು ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು ವಿವಿಧ ವಿಭಾಗಗಳನ್ನು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಮುಂಡಗೋಡನಲ್ಲಿರುವ ಕೆಲವು ಖಾಸಗಿ ವೈದ್ಯರ ಜತೆ ಚರ್ಚಿಸಿ ನಮ್ಮ ಅಸ್ಪತ್ರೆಯಲ್ಲಿ ದಿನದ ಕೆಲ ಸಮಯ ಕಾರ್ಯನಿರ್ವಹಿಸುವಂತೆ ಮನವಿ ಮಾಡಲು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದ್ದೇನೆ. ಬಡ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಡಯಾಲಿಸಸ್ ಕೇಂದ್ರದಲ್ಲಿ ಇಂಜೆಕ್ಷನ್ ಸರ್ಕಾರಿ ಆಸ್ಪತ್ರೆಯಿಂದಲೇ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಹೆರಿಗೆ ಪ್ರಕರಣಗಳು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸಮಾನಾಂತರವಾಗಿವೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನಷ್ಟು ಹೆರಿಗೆ ಪ್ರಮಾಣ ಹೆಚ್ಚಿಗೆ ಮಾಡುವಂತೆ ಸೂಚಿಸಿದರು.
ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಮಾಡಲು ಕಾರವಾರಕ್ಕೆ ಹೋಗಬೇಕಿತ್ತು. ಈಗ ಮುಂಡಗೋಡ ಆಸ್ಪತ್ರೆಯಲ್ಲಿ ಮಾಡಲು ಆರೋಗ್ಯ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಅದಕ್ಕೆ ಅನುಮೋದನೆ ನೀಡಲಾಗುವುದು ಎಂದರು.
ಈ ವೇಳೆ ಶಿರಸಿ ಉಪ ವಿಭಾಗಾಧಿಕಾರಿ ಆರ್. ದೇವರಾಜ, ತಹಸಿಲ್ದಾರ್ ಶಂಕರ ಗೌಡಿ, ಡಾ. ನರೇಂದ್ರ ಪವಾರ ಇತರರಿದ್ದರು.