

ಹೊಸದುರ್ಗ: 2009ರಲ್ಲಿ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಬಿಜೆಪಿ ಸಚಿವರು, ಎಲ್ಲ ಶಾಸಕರ ಪ್ರಾಬಲ್ಯದ ಮಧ್ಯೆಯೂ ಗಣನೀಯ ಮತ ಪಡೆದು ಸೋತಿರುವ ನನಗೆ ಈ ಬಾರಿ ಟಿಕೆಟ್ ಕೊಡಿಸಲು ಹಿರಿಯ ಮುಖಂಡರ ಆಶೀರ್ವಾದ ಬೇಕಿದೆ ಎಂದು ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಕೋರಿದರು.
ತಾಲೂಕು ಮಾದಿಗ ಸಮಾಜ ಪಟ್ಟಣದ ಆಶೋಕ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮುದಾಯದ ಸಚಿವರು, ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮಾದಿಗ ಸಮುದಾಯ ವಿವಿಧ ಕಾರಣಕ್ಕೆ ಒಗ್ಗಟ್ಟು ಪ್ರದರ್ಶನದಲ್ಲಿ ವಿಫಲಗೊಂಡಿರುವ ಕಾರಣಕ್ಕೆ ರಾಜಕೀಯ ಸ್ಥಾನಮಾನ ದೊರೆಯುತ್ತಿಲ್ಲ. ನಮ್ಮಲ್ಲಿನ ಸಣ್ಣಪುಟ್ಟ ಲೋಪ ಮರೆತು ಒಗ್ಗೂಡಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಯಾದವ ಹಾಗೂ ಮಾದಿಗ ಸಮುದಾಯದ ವತಿಯಿಂದ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿ, ಸ್ಥಳೀಯ ಹಾಗೂ ಮಾದಿಗ ಸಮುದಾಯದ ವಿದ್ಯಾವಂತ ಯುವಕ, ಕಾಂಗ್ರೆಸ್ ಪಕ್ಷದ ನಿಷ್ಠಾವಂತನಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.