

ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ತೇಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸರ್ವೆನಂಬರ್ ೯೩ರಲ್ಲಿ ೧೩ ಎಕರೆ ಜಮೀನು ನೀಡಬೇಕು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕರ ವೇದಿಕೆಯ ಬೇಡಿಕೆಯನ್ನು ಬಿಜೆಪಿ ಮುಕ್ತಮನಸ್ಸಿನಿಂದ ಬೆಂಬಲಿಸುತ್ತದೆ. ಜೊತೆಗೆ ಜಮೀನು ಮಂಜೂರಾತಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಅಧ್ಯಯನ ಸಂಸ್ಥೆ ದಶಕದಿಂದ ನಿರಂತರವಾಗಿ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಗೆ ಅಗತ್ಯವಿರುವ ಜಮೀನು ಮಂಜೂರು ಮಾಡಿದ್ದಲ್ಲಿ ಮತ್ತಷ್ಟು ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬುದ್ಧ ವಿಹಾರಧಾಮ ಸ್ಥಾಪನೆಯೊಂದಿಗೆ ನಾಡಿನ ದಾರ್ಶನಿಕರ ವಿಚಾರಧಾರೆಗಳನ್ನು ಪ್ರಚಾರಮಾಡಲು ಮತ್ತು ಜನಜಾಗೃತಿ ಮೂಡಿಸಲು ಈ ಕೇಂದ್ರಗಳನ್ನು ಸ್ಥಾಪನೆ ಮಾಡುವ ಉz್ದೆÃಶ ಸಕಾರಾತ್ಮಕವಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ತಯಾರಿ ನಡೆಸಲು ವೇದಿಕೆಯಾಗಲು ಅಧ್ಯಯನ ಕೇಂದ್ರ ಸ್ಥಾಪನೆ ಅನಿವಾರ್ಯ ಎಂದರು.
ವಿವಿಧ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ ಎಲ್ಲ ವರ್ಗದ ಸಮುದಾಯಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಇದುವರೆಗೂ ಅಂಬೇಡ್ಕರ್ ಅಧ್ಯಯನಕೇಂದ್ರ ಮತ್ತು ಬುದ್ಧವಿಹಾರ ಧಾಮ ಸ್ಥಾಪನೆಯಂತಹ ವಿಚಾರಗಳಿಗೆ ಜಮೀನು ನೀಡಿರುವುದಿಲ್ಲ. ಈಗ ಸಮಾನ ಮನಸ್ಕರ ವೇದಿಕೆ ಜಮೀನು ಮಂಜೂರು ಬೇಡಿಕೆ ಮುಂದಿಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ಜಮೀನಿರುವ ಪ್ರದೇಶದಲ್ಲಿ ೯೨ನೇ ಸರ್ವೆನಂಬರಿನಲ್ಲಿ ೪ ಎಕರೆ ಜಮೀನು ಮಂಜೂರಾಗಿದ್ದು, ಆ ಜಮೀನನ್ನು ಸ.ನಂ. ೯೩ಕ್ಕೆ ಸೇರಿಸಿರುವುದು ಕಾನೂನು ಬಾಹಿರವಾಗಿದೆ. ಈ ಪ್ರಕರಣದಲ್ಲಿ ದೊಡ್ಡವ್ಯಕ್ತಿಗಳ ಕೈವಾಡವಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿಬರುತ್ತಿದೆ. ಸರ್ಕಾರ ಸಮಗ್ರ ತನಿಖೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪರಿಶಿಷ್ಟಮೋರ್ಚಾ ರಾಜ್ಯ ವಕ್ತಾರ ಸೀತಾರಾಮಭರಣ್ಯ, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತ ಅನಿಲ್‌ಕುಮಾರ್, ಮುಖಂಡರಾದ ಕೋಟೆ ದಿನೇಶ್, ಹಿರೇಮಗಳೂರು ಕೇಶವ ಉಪಸ್ಥಿತರಿದ್ದರು.