

ಸರಗೂರು: ತಾಲೂಕಿನ ಬಿದರಹಳ್ಳಿ ಗ್ರಾಮದಿಂದ ಗೆಂಡತ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಸೋಮವಾರ ಕಂಚನಹಳ್ಳಿ ಗ್ರಾಮದ ಬಳಿ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಯಿತು.
ಭೀಮನ ಕೊಲ್ಲಿಯಲ್ಲಿ ಆಯೋಜಿಸಿದ್ದ ಶುಂಠಿ ಬೆಳೆಗಾರರ ಸಭೆಯಲ್ಲಿ ಪಾಲ್ಗೊಳ್ಳಲೆಂದು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ತೆರಳುತ್ತಿದ್ದ ವೇಳೆ ಮಾರ್ಗದಲ್ಲಿನ ಗುಂಡಿಗಳನ್ನು ಕಂಡು ದಿಢೀರ್ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿಗಳು ಬರುತ್ತಾರೆಂದು ರಾಷ್ಟ್ರೀಯ ಹೆದ್ದಾರಿಯಲ್ಲಿನ ಹಳ್ಳಕೊಳ್ಳ ಮುಚ್ಚಲಾಗುತ್ತದೆ. ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರಸ್ತೆ ಅವ್ಯವಸ್ಥೆ ಶಾಸಕರು ಹಾಗೂ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು ಶಾಂತಕುಮಾರ್ ಕಿಡಿಕಾರಿದರು.
ಬಿದರಹಳ್ಳಿ ಗ್ರಾಮದಿಂದ ಮೂರ್ಬಾಂದು, ಕೆಂಚನಹಳ್ಳಿ, ಎನ್‌ಬೇಗೂರು, ಹೊಸಹಳ್ಳಿ, ಗೆಂಡತ್ತೂರು ವ್ಯಾಪ್ತಿಯ ರೈತರು ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಪ್ರಾಣಿಗಳೂ ತಿರುಗಾಡಲು ಯೋಗ್ಯವಲ್ಲದ ರಸ್ತೆ ಇದಾಗಿದೆ. ಆದರೆ ಇದೀಗ ಮುಖ್ಯಮಂತ್ರಿಗಳ ಓಲೈಕೆಗಾಗಿ ಮೈಸೂರು-ಎಚ್.ಡಿ.ಕೋಟೆ ರಸ್ತೆ ಹಳ್ಳಕೊಳ್ಳ ಮುಚ್ಚುವ ಕಾರ್ಯ ನಡೆದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು .
ಕೂಡಲೇ ರಸ್ತೆ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಸಂಬಂಧಪಟ್ಟ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಗುಂಡ್ಲುಪೇಟೆ ನಾಗಾರ್ಜುನ, ಪಿ.ಸೋಮಶೇಖರ್, ಸುರೇಶ್ ಶೆಟ್ಟಿ, ಮರಿಸ್ವಾಮಿ ನಾಯಕ, ಸುನಿಲ್ಕುಮಾರ್, ಕೆಂಡಗಣ್ಣಸ್ವಾಮಿ, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಮಲ್ಲೇಶ್, ರಂಗರಾಜು, ಬನ್ನೂರು ಸೂರಿ, ಶಿವಸ್ವಾಮಿ ಇತರರಿದ್ದರು.