

ಎಚ್.ಡಿ.ಕೋಟೆ : ರಾಜ್ಯದ ನಾಯಕ ಸಮುದಾಯದ ಪ್ರಭಾವಿ ಮುಖಂಡ ಕಾಂಗ್ರೆಸ್ ಪಕ್ಷದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಮಜಗೊಳಿಸಿರುವುದು ನಾಯಕ ಸಮಾಜಕ್ಕೆ ಮಾಡಿದ ಅವಮಾನ. ಹಾಗಾಗಿ ಕಾಂಗ್ರೆಸ್ ಪಕ್ಷ ಪರ ವಿಮರ್ಶೆ ಮಾಡಿ ಮತ್ತೆ ರಾಜಣ್ಣ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಎಸ್.ಚಿಕ್ಕಮಾದು ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಜಿನ್ನಹಳ್ಳಿ ರಾಜನಾಯಕ ಆಗ್ರಹಿಸಿದರು.
ರಾಜಣ್ಣ ಅವರನ್ನು ಕಾಂಗ್ರೆಸ್ ಪಕ್ಷ ಏಕಾಏಕಿ ಸಂಪುಟದಿಂದ ವಜಾಗೊಳಿಸಿರುವುದಕ್ಕೆ ವಾಲ್ಮೀಕಿ ಸಮುದಾಯ ಖಂಡಿಸುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ 15 ಮೀಸಲಾತಿ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರು ಗೆದ್ದಿದ್ದಾರೆ. ವಾಲ್ಮೀಕಿ ಜನಾಂಗ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಎಂಬುದು ಇದರಿಂದ ತಿಳಿಯಲಿದೆ. ಇತ್ತೀಚಿನ ದಿನಗಳಲ್ಲಿ ಪಕ್ಷದ ಕೆಲವರ ದ್ವೇಷ, ಕುಮ್ಮಕ್ಕು, ಕುತಂತ್ರಗಳಿಂದ ಸಮಾಜದ ಸಚಿವರ ಜನಪ್ರಿಯತೆ ಸಹಿಸಲಾಗದೆ ಇವರನ್ನು ಇಕ್ಕಟ್ಟಿಗೆ ಸಿಲುಕಿಸಿ ವಾಲ್ಮೀಕಿ ಸಮಾಜದ ಪ್ರಮುಖ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟಿರುವುದು ವಾಲ್ಮೀಕಿ ಜನಾಂಗಕ್ಕೆ ಬಹಳ ನೋವುಂಟು ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅನಿಲ್ ಚಿಕ್ಕಮಾದು ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಕ್ಯಾತನಹಳ್ಳಿ ನಾಗರಾಜು ಮಾತನಾಡಿ, ಹಳೇ ಮೈಸೂರು ಭಾಗದ ನಾಯಕ ಸಮುದಾಯದ ಏಕೈಕ ಶಾಸಕ ಅನಿಲ್ ಚಿಕ್ಕಮಾದು ಎರಡನೇ ಬಾರಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನವನ್ನು ನೀಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ದಾಸನಾಯಕ, ಜವರನಾಯಕ, ಕೃಷ್ಣನಾಯಕ, ಜಯಶೀಲಾ, ರಘು, ಚಿಕ್ಕಣ್ಣ, ಮಹೇಶ್ ಇದ್ದರು.