

ಶಿರಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರಾಗಿದ್ದ ಅಹಿಂದ ನಾಯಕ ಕೆ.ಎನ್.ರಾಜಣ್ಣ ಅವರ ಅಧಿಕಾರವನ್ನು ಕಿತ್ತುಕೊಳ್ಳಲು ಬಲಿಷ್ಠ ಸಮುದಾಯಗಳು ರೂಪಿಸಿದ ಸಂಚಿನ ವಿರುದ್ಧ ಅ.21ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ಯಾತಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಡ್ಯಾಗೇರಹಳ್ಳಿ ತಿಳಿಸಿದರು.
ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಅನ್ನು ಹಲವು ವರ್ಷಗಳಿಂದ ಅಹಿಂದ ಸಮುದಾಯ ಬೇಷರತ್ ಆಗಿ ಬೆಂಬಲಿಸಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ನಮ್ಮ ಪಾಲಿದೆ. ಕೆ.ಎನ್.ರಾಜಣ್ಣ ಅವರಿಗೆ ಸಮಯಾವಕಾಶ ಕೊಡದೆ ವಜಾ ಮಾಡಿದ್ದಾರೆ. ಇದರ ವಿರುದ್ಧ ಶಿರಾ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಡಿಎಸ್ಎಸ್ ಅಂಬೇಡ್ಕರ್ ವಾದ ಸಂಘಟನೆಯ ಜಿಲ್ಲಾ ಸಂಚಾಲಕ ಮುರುಳಿ ಕುಂದೂರು ಮಾತನಾಡಿ, ಜಿಲ್ಲೆ ಅಹಿಂದ ವರ್ಗದ ನಾಯಕ ರಾಜಣ್ಣ ಅವರನ್ನು ಕಾಂಗ್ರೆಸ್ ಸರ್ಕಾರ ಕ್ಷುಲಕ ಕಾರಣಕ್ಕೆ ಸಚಿವ ಸ್ಥಾನದಿಂದ ವಜಾ ಮಾಡಿದೆ. ಅವರಿಗೆ ಈ ಕೂಡಲೇ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಹುಳಿಗೆರೆ ಡಾ.ಗುಡ್ಡಣ್ಣ ಮಾತನಾಡಿದರು. ವಾಲ್ಮೀಕಿ ಸೇನೆ ಜಿಲ್ಲಾಧ್ಯಕ್ಷ ಕಪ್ಪೂರು ಶ್ರೀಧರ್, ಮುಖಂಡರಾದ ಕೊಟ್ಟ ರಾಜಣ್ಣ, ದೊಡ್ಡಗೂಳ ಪರುಷಣ್ಣ, ಶ್ರೀನಿವಾಸ್, ಬಸವರಾಜು, ಗೋವಿಂದಪ್ಪ, ಅನಂತರಾಮು, ಸತೀಶ್ ನಾಯಕ, ಎಸ್.ರಂಗಪ್ಪ, ಮಂಜುನಾಥ, ರವೀಂದ್ರ ಪಾಳೇಗಾರ, ಅಭಿಷೇಕ್ ಸೇರಿದಂತೆ ಹಲವರು ಇದ್ದರು.