ಚುನಾವಣೆ ಘೋಷಣೆಗೂ ಮುನ್ನಾ ಮಾಹಿತಿ ನೀಡಿ

5 - Copy
Published on

ಮೈಸೂರು: ಪ್ರವರ್ಗ ಒಂದರಲ್ಲಿ ಇರುವ 24 ಮನೆ ತೆಲುಗುಶೆಟ್ಟರ ಸಮುದಾಯವನ್ನು ಅಲೆಮಾರಿ ಸಮುದಾಯಗಳ ಗುಂಪಿಗೆ ಸೇರಿಸುವಂತೆ ಮನವಿ ಬಂದಿದ್ದು, ಸಮುದಾಯದ ಮುಖಂಡರು ಅಗತ್ಯ ಮಾಹಿತಿ ನೀಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.


ಕರ್ನಾಟಕ 24 ಮನೆ ತೆಲುಗುಶೆಟ್ಟರ ಸಂಘದ ವತಿಯಿಂದ ಸರಸ್ವತಿಪುರಂನ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ತೆಲುಗುಶೆಟ್ಟರ ಸಂಘದವರು ಹಿಂದುಳಿದ ಆಯೋಗವನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ನೀಡಬೇಕು. ಚುನಾವಣೆ ಘೋಷಣೆಯಾದರೆ, ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ನಿರತರಾಗುತ್ತಾರೆ ಎಂದು ಸಲಹೆ ನೀಡಿದರು.


ಮಕ್ಕಳ ಆಸಕ್ತಿ ಕ್ಷೇತ್ರಗಳ ಅನುಗುಣವಾಗಿ ಅವರನ್ನು ಬೆಳೆಸುವ ಮೂಲಕ ಅಭಿವೃದ್ಧಿ ಹೊಂದಲು ಪೋಷಕರು ಸಹಕಾರ ನೀಡಬೇಕು. ಎಲ್ಲ ಸಮುದಾಯದವರು ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸುತ್ತಿರುವುದು ತುಂಬ ಸಂತಸವಾಗಿದೆ ಎಂದರು.
ಶಾಸಕ ಎಲ್.ನಾಗೇಂದ್ರ, ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ವಿ.ರಾಜು, ಜಿಪಂ ಮಾಜಿ ಸದಸ್ಯ ಎನ್.ಮಹದೇವು, ಸಂಘದ ಅಧ್ಯಕ್ಷ ವಿ.ಮಂಜುನಾಥ್, ಉಪಾಧ್ಯಕ್ಷರಾದ ಎಚ್.ಎಸ್.ಅಪ್ಪಾಜಿ ಶೆಟ್ಟಿ, ಎಚ್.ಆರ್.ಕೃಷ್ಣಶೆಟ್ಟಿ, ರಾಮಶೆಟ್ಟಿ, ಆರ್.ಸುಬ್ರಹ್ಮಣ್ಯ, ಬಿ.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ, ಸಹ ಕಾರ್ಯದರ್ಶಿ ಆರ್.ನಾಗರಾಜಶೆಟ್ಟಿ, ಖಜಾಂಚಿ ಶ್ರೀಧರ್‌ಮೂರ್ತಿ, ಮುಖಂಡ ಬೂದುಬಾಳು ವೆಂಕಟಸ್ವಾಮಿ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು 24 ಮನೆ ತೆಲುಗುಶೆಟ್ಟರ ಸಂಘದ ನೂತನ ಸಭಾ ಭವನವನ್ನು ಉದ್ಘಾಟಿಸಿದರು. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net