ಅರಣ್ಯ ಜಾಗದಲ್ಲಿರುವ ಮನೆ ಮಾಹಿತಿ ನೀಡಿ

Meeting in Tehsildar Office
Published on


ಹಿರೇಕೆರೂರ: ತಾಲೂಕಿನಲ್ಲಿ ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡವರ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಅರಣ್ಯ ಮತ್ತು ಜಿಪಂ ಅಧಿಕಾರಿಗಳು ಸಂಪೂರ್ಣ ವಿವರ ಒದಗಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಮತ್ತು ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೆ ಪಟ್ಟಾ ಕೊಡುವ ಬಗ್ಗೆ ಮಾಹಿತಿ ಸಂಗ್ರಹಿಸುವ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ರೋಗಗಳು ಹಬ್ಬತೊಡಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಜಿಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರ ಕುರಿತು ಮಾಹಿತಿ ನೀಡಬೇಕು. ಇದರಲ್ಲಿ ಯಾವುದೇ ಲೋಪದೋಷಗಳಾಗಬಾರದು. ಅರ್ಹ ಫಲಾನುಭವಿಗಳ ಮಾಹಿತಿಯನ್ನು ಮಾತ್ರ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಕೆ. ಚನ್ನಪ್ಪ, ತಹಸೀಲ್ದಾರರಾದ ಎಚ್. ಪ್ರಭಾಕರಗೌಡ, ಕೆ. ಗುರುಬಸವರಾಜ, ತಾಪಂ ಇಒಗಳಾದ ಕೆ.ಬಿ. ಮಲ್ಲಾಡದ, ಕೆ. ಮಲ್ಲಿಕಾರ್ಜುನ, ಜಿಪಂ ಎಇಇ ನಂದೀಶ, ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕಾರೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಮೇಲಧಿಕಾರಿಗಳು ಇದ್ದರು. ತಹಸೀಲ್ದಾರ್ ಕಚೇರಿ ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net