

ಮೈಸೂರು: ಜಿಲ್ಲೆಯಲ್ಲಿನ ದುರ್ಬಲ ಜೇನು ಕುರುಬ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜೇನು ಕುರುಬ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಜೆ.ಟಿ.ರಾಜಪ್ಪ ಎಚ್ಚರಿಸಿದರು.
ಪರಿಶಿಷ್ಟ ವರ್ಗಗಳ ಸಮಗ್ರ ಯೋಜನಾಧಿಕಾರಿ ಮುನಿರಾಜು ಅವರು ಜೇನು ಕುರುಬ ಸಮುದಾಯದ ಮುಖಂಡರ ಸಭೆಯನ್ನೇ ಕರೆದಿಲ್ಲ. 3 ತಿಂಗಳಿಂದ ಪೌಷ್ಟಿಕ ಆಹಾರವನ್ನು ಹಾಡಿಗಳಿಗೆ ವಿತರಣೆ ಮಾಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕೊಡಗು ಜಿಲ್ಲೆಯಲ್ಲಿ ಪ್ರತಿ ತಿಂಗಳು ಪೌಷ್ಟಿಕ ಆಹಾರ ವಿರತಣೆಯಾಗುತ್ತಿದೆ. ಆದರೆ ಮೈಸೂರು ಜಿಲ್ಲೆ ಯಾವ ರಾಜ್ಯದಲ್ಲಿ ಇದೆ ಎಂಬ ಸಂಶಯ ಮೂಡುತ್ತಿದೆ. ಜಿಲ್ಲೆಯಲ್ಲಿ ಜೇನು ಕುರುಬರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಸಮುದಾಯದವರನ್ನು ನಿರ್ಲಕ್ಷಿಸಿರುವ ಅಧಿಕಾರಿಗಳಿಂದ ಸಮುದಾಯದ ಶ್ರೇಯೋಭಿವೃದ್ಧಿ ಸಾಧ್ಯವಿಲ್ಲ ಎಂದರು.
ಗಿರಿಜನ ಆಶ್ರಮ ಶಾಲೆಗಳಲ್ಲಿ ನುರಿತ ಶಿಕ್ಷಕರನ್ನು ನೇಮಕ ಮಾಡಿ ಗುಣಮಟ್ಟದ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. 1965-66ರಲ್ಲಿ ಹುಣಸೂರು ತಾಲೂಕಿನಲ್ಲಿ ಇದ್ದ ಜೇನು ಕುರುಬರ ಕಚೇರಿಯನ್ನು 2006ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದನ್ನು ಮರು ಸ್ಥಾಪಿಸಬೇಕು. ಅನುದಾನವನ್ನು ಅದೇ ಕಚೇರಿ ಮೂಲಕ ಜೇನು ಕುರುಬರಿಗೆ ತಲುಪಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ಬಸವಣ್ಣ, ಚಂದ್ರು, ಜೆ.ಟಿ.ಚಂದ್ರು ಇದ್ದರು.