

ತೀರ್ಥಹಳ್ಳಿ: ಸ್ಥಳೀಯರು, ರೈತರನ್ನು ಹೊರಗಿಟ್ಟು ಅಂದಾಜು 267.70 ಕೋಟಿ ರೂ. ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಡಿಪಿಆರ್, ಅಂದಾಜು ಮೊತ್ತ, ಕಾರ್ಯಾದೇಶದ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ರೈತಸಂಘದ ಸದಸ್ಯರು ಆರೋಪಿಸಿದರು.
ಗುರುವಾರ ಕೊಪ್ಪ ವೃತ್ತದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂಭಾಗ ಹೆಗ್ಗೋಡು, ಹೊಸಹಳ್ಳಿ, ಮೇಲಿನ ಕುರುವಳ್ಳಿ, ಮುಳುಬಾಗಿಲು, ತೀರ್ಥಮುತ್ತೂರು, ಬಸವಾನಿ, ಕುಡುಮಲ್ಲಿಗೆ ಗ್ರಾಪಂ ವ್ಯಾಪ್ತಿಯ ರೈತರು ಪ್ರತಿಭಟನೆ ನಡೆಸಿ, ಅಸಮಾಧಾನ ವ್ಯಕ್ತಪಡಿಸಿದರು.
ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ಉದ್ದೇಶಿತ ಕಾಮಗಾರಿ ಚಾಲ್ತಿಯಲ್ಲಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಕಾಮಗಾರಿ ಮಾಹಿತಿ ನೀಡುವಂತೆ 36 ದಿನಗಳ ಹಿಂದೆ ಅರ್ಜಿ ಸಲ್ಲಿಸಿ ಮಾಹಿತಿಗೆ ಒದಗಿಸಲು ತಗಲುವ ಎರಡೂವರೆ ಸಾವಿರ ರೂ. ಮೊತ್ತವನ್ನು ಭರಿಸಿದ್ದೇವೆ. ಆದರೆ ಅಧಿಕಾರಿಗಳು ನೀವು ಮೇಲ್ಮನವಿ ಸಲ್ಲಿಸಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮಸ್ಥರನ್ನು ಹೊರಗಿಟ್ಟು ಯೋಜನೆ ಅನುಷ್ಠಾನ ಮಾಡುವ ಅಗತ್ಯ ಇತ್ತೇ ಎಂದು ಆರ್‌ಟಿಐ ಅರ್ಜಿ ಸಲ್ಲಿಸಿದ ಸ್ಥಳೀಯರಾದ ಅಭಿಲಾಷ್ ಸೌಳಿ ಪ್ರಶ್ನಿಸಿದರು.
ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರಂಭದಲ್ಲಿ ಪವರ್ ಪ್ಲಾಂಟ್ ಎಂಬ ಸುದ್ದಿಯನ್ನು ಹರಿಬಿಟ್ಟು ಕಾಮಗಾರಿ ಮಾಡಲು ಮುಂದಾಗಿರುವುದು ಗ್ರಾಮಸ್ಥರಲ್ಲಿ ಅನುಮಾನ ಸೃಷ್ಟಿಸಿದೆ. ಅಧಿಕಾರಿಗಳು ಮಾಹಿತಿ ಕೊಡಲು ಸತಾಯಿಸುತ್ತಿರುವ ಒಳಹುನ್ನಾರ ಏನೆಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳು ಮಾಹಿತಿ ನಿರಾಕರಣೆ ಮಾಡುತ್ತಿರುವ ಹಿಂದಿನ ಒಳಗುಟ್ಟು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೋಡ್ಲು ವೆಂಕಟೇಶ್ ಆಗ್ರಹಿಸಿದರು.
ಭೀಮನಕಟ್ಟೆ ಬಳಿ ತುಂಗಾ ನದಿಯಿಂದ ಜಾಕ್ವೆಲ್ ಮೂಲಕ ತಾಲೂಕಿನ 36 ಗ್ರಾಪಂನ 1600 ಮಜರೆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಪ್ರತಿನಿತ್ಯ ಸುಮಾರು 5 ಕೋಟಿ ಲೀಟರ್ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುವ ಯೋಜನೆ ಉದ್ದೇಶ. ಅಷ್ಟು ಪ್ರಮಾಣದ ನೀರು ಪ್ರಸ್ತುತ ಯೋಜನಾ ಸ್ಥಳದಲ್ಲಿ ಲಭ್ಯವಿಲ್ಲ. ಅಲ್ಲದೇ ಮಲೆನಾಡಿನ ಹಳ್ಳಿಗಳು ಕುಡಿಯುವ ನೀರಿನ ಸ್ವಾವಲಂಬನೆ ಹೊಂದಿದ್ದು, ಅವೈಜ್ಞಾನಿಕವಾದ ಕಾಮಗಾರಿ ಪರಿಚಯಿಸುವ ಮೂಲಕ ಸ್ಥಳೀಯ ನೈಸರ್ಗಿಕ ಸಮತೋಲನೆ ಹಾಳು ಮಾಡಲಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಎ.ಸಿ.ಕೃಷ್ಣಮೂರ್ತಿ, ರಮೇಶ್, ಪ್ರವೀಣ್ ಇತರರಿದ್ದರು.
ಕಚೇರಿಯಲ್ಲಿಲ್ಲ ಅಧಿಕಾರಿಗಳು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಲು ಲಭ್ಯವಿಲ್ಲ. ಫೋನ್ ಮಾಡಿದರೂ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿ ಆಗಮಿಸುತ್ತಿದ್ದು, ಜನಪ್ರತಿನಿಧಿಗಳ ನಿಯಂತ್ರಣ ತಪ್ಪಿದಂತಿದೆ. ಎಲ್ಲ ಪಕ್ಷಗಳು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು ಗ್ರಾಮಸ್ಥರನ್ನು ಕಡೆಗಣಿಸಿದರೆ ತಕ್ಕಪಾಠ ಕಲಿಸುತ್ತೇವೆ ಎಂದು ರೈತಸಂಘ ಎಚ್ಚರಿಕೆ ನೀಡಿದೆ.