

ಹುಬ್ಬಳ್ಳಿ: ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಆಶಾ ಡಯಾಬಿಟಿಕ್ ಟ್ರಸ್ಟ್ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಮಧುಮೇಹ ಜಾಗೃತಿ ಮತ್ತು ಆರೋಗ್ಯ ತಪಾಸಣೆ ಶಿಬಿರವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಅಮಿತ ಸತ್ತೂರ ಮಾತನಾಡಿ, ಬಲಗೈ ನೋವು, ಹೃದಯ ಬಡಿತ ಹೆಚ್ಚಾಗುವುದು, ಆಯಾಸ ಹೆಚ್ಚಾಗುವುದು, ಆಸಿಡಿಟಿ ಕಡಿಮೆಯಾಗದಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು ಸಲಹೆ ನೀಡಿದರು.
ಶಸ್ತ್ರ ಚಿಕಿತ್ಸಕ ಡಾ. ಸುನೀಲ ಕರಿ ಮಾತನಾಡಿ. ಈಗಿನ ಜನರು ತಮ್ಮ ಮುಖದ ಕಾಳಜಿ ವಹಿಸಿದಂತೆ ಕಾಲುಗಳಿಗೂ ಮಹತ್ವ ನೀಡಬೇಕು. ಸಕ್ಕರೆ ಕಾಯಿಲೆ ಇದ್ದವರು ಕಾಲಿನ ಬಗ್ಗೆ ಹೆಚ್ಚು ಕಾಳಜಿ ತೋರಬೇಕು. ಹೆಚ್ಚು ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ತಮ್ಮ ಕಾಲಿಗೆ ಮುಳ್ಳು ಇಲ್ಲವೆ ಚೂಪಾದ ವಸ್ತು ತಾಕಿದಾಗ ಅದು ವಾಸಿಯಾಗದಿದ್ದಾಗ ಅಲಕ್ಷ ಮಾಡಬಾರದು. ಇದರಿಂದ ಗ್ಯಾಂಗ್ರೀನ್ ಆಗಬಹುದು. ಹಾಗೆಯೇ ಕಾಲಿಗೆ ಬಿಗಿಯಾದ ಶೂ, ಸಾಕ್ಸ್ ಹಾಕಬಾರದು. ಚೂಪಾಗಿ ಬಂದ ಉಗುರುಗಳನ್ನು ಕತ್ತರಿಸಬೇಕು ಎಂದು ಮಾಹಿತಿ ನೀಡಿದರು.
ಮಧುಮೇಹ ತಜ್ಞ ಡಾ.ಜಿ.ಬಿ. ಸತ್ತೂರ ಮಾತನಾಡಿ, ಸಕ್ಕರೆ ಕಾಯಿಲೆ 35ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ದಿನವು ಬೆಳಗ್ಗೆ ವ್ಯಾಯಾಮ, ನಿಯಮಿತ ಆಹಾರ, ಇನ್ಸೂಲಿನ್ ಇಂಜೆಕ್ಸನ್, ಗುಳಿಗೆ ಮತ್ತು ವೈದ್ಯರನ್ನು ಆಗಾಗ ಸಂಪರ್ಕಿಸಬೇಕು. ಇದು 60 ವಯಸ್ಸಿನ ನಂತರವು ಬರಬಹುದು. ಪ್ರತಿ 100 ಜನರಲ್ಲಿ 15 ಜನರಿಗೆ ಇದು ಇರುತ್ತದೆ. ಗರ್ಭಿಣಿಯರಲ್ಲೂ ಕಂಡು ಬರುತ್ತದೆ. ಹೆರಿಗೆ ನಂತರ ಮಾಯವಾಗುವುದು. ರಕ್ತ ಮತ್ತು ಮೂತ್ರ ಪರಿಕ್ಷೆಯಿಂದ ಸಕ್ಕರೆ ಕಾಯಿಲೆ ಗುರುತಿಸಬಹುದು. ಪ್ರತಿ ದಿನ 2 ತರಹದ ಹಣ್ಣು, ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಿರೀಶ ನಾಲವಾಡ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಬಾಪುಗೌಡ ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಸದಸ್ಯರಾದ ಜಗದೀಶ ಮಠದ, ವಸಂತ ಭಸ್ಮೆ, ಮಂಜುನಾಥ ಹೊಂಬಳ, ಎಂ.ವಿ. ಕರಮರಿ, ಈಶ್ವರ ಗುಳಗಣ್ಣವರ, ಸಿದ್ದೇಶ್ವರ ಕಮ್ಮಾರ, ವಿದ್ಯಾಧರ ಯೆಲ್ಗಾಚ್, ಎಂ.ಕೆ. ಪಾಟೀಲ, ಬಿ.ಬಿ. ಪಾಟೀಲ, ಪ್ರೇಮಚಂದ, ಉಪಸ್ಥಿತರಿದ್ದರು. ಭರತ ಕುಲಕರ್ಣಿ ನಿರೂಪಿಸಿದರು. ಶಂಕರ ಹಿರೇಮಠ ವಂದಿಸಿದರು.