ಶಿಕ್ಷಣದ ಜತೆಗೆ ಸಾಹಿತ್ಯಕ್ಕೂ ಪ್ರಾಮುಖ್ಯತೆ ನೀಡಿ

3sri-1
Published on

ಶೃಂಗೇರಿ: ಮಾನವನಲ್ಲಿರುವ ಸಂಕುಚಿತ ಭಾವ ಮರೆಮಾಡಿ ವಿಶಾಲತೆ ಬೆಳೆಸುವಲ್ಲಿ ಕಲೆ, ಸಾಹಿತ್ಯ, ಸಂಗೀತ ಪೂರಕವಾಗಿದೆ ಎಂದು ತೊರೆಹಡ್ಲು ಪ್ರೌಢಶಾಲೆ ಶಿಕ್ಷಕ ಎಸ್.ಗುರುಮೂರ್ತಿ ಹೇಳಿದರು.

ಬಿಜಿಎಸ್ ಶಿಕ್ಷಣ ವಿಶ್ವವಿದ್ಯಾಲಯ ಆಧ್ಯಾತ್ಮಿಕ ವೇದಿಕೆಯಲ್ಲಿ ಶ್ರೀ ಶಾರದಾಂಬ ಪ್ರಕಾಶನ ಆಯೋಜಿಸಿದ ಪುಸ್ತಕ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ, ಕಲೆಗೆ ಈ ಹಿಂದೆ ರಾಜಾಶ್ರಯವಿತ್ತು. ಪ್ರಸ್ತುತ ಮಠ ಮಾನ್ಯಗಳು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿವೆ. ಶಿಕ್ಷಣದ ಜತೆ ಸಾಹಿತ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅನಿವಾರ್ಯತೆ ಇದೆ ಎಂದರು.

ಶಿಕ್ಷಕರು ಸರ್ವರಲ್ಲೂ ಸಾಹಿತ್ಯದ ಅಭಿರುಚಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಶಿಕ್ಷಣ ಮನುಷ್ಯನನ್ನು ಪರಿಪಕ್ವವಾಗಿ ಬೆಳೆಸಲು ಇರುವ ವೇದಿಕೆ. ಶಿಕ್ಷಣ ಸಂಸ್ಥೆಯಲ್ಲಿ ಜಾತಿ, ಮತ, ಧರ್ಮಗಳ ಬೇಧವಿಲ್ಲ. ದೇಹಕ್ಕೆ ಕೊಳೆ ಹಿಡಿದರೆ ಸ್ನಾನ ಮಾಡಬಹುದು. ಆದರೆ ಮನಸ್ಸಿಗೆ ಖೇದ ಉಂಟಾದಾಗ ದೇವರ ಮೊರೆ ಹೋಗಬೇಕು. ನಮಗೆ ಸಾಹಿತ್ಯದಂತೆ ಆಧ್ಯಾತ್ಮಿಕ ಮೌಲ್ಯವೂ ಪ್ರಮುಖ. ಅದು ನಮ್ಮೊಳಗಿನ ಕತ್ತಲನ್ನು ಹೊಡೆದೊಡಿಸಲು ಇರುವ ಸುಲಲಿತ ಹಾದಿ ಎಂದರು.

ಸಾಹಿತಿ ಬಿ.ಶಿವಶಂಕರ್ ಅವರ 25ನೇ ಹನಿಗವನ ಕೃತಿಯನ್ನು ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಸಿ.ನಾಗೇಶ್ ಬಿಡುಗಡೆಗೊಳಿಸಿದರು. ವಲಯ-6ರ ರೋಟರಿ ಉಪಗರ್ವನರ್ ಎಚ್.ಎಸ್.ನಟೇಶ್, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ವಾಗ್ಮಿ ಮಂಜುನಾಥ್ ಗೌಡ ಅವರನ್ನು ಗೌರವಿಸಲಾಯಿತು. ಸಾಹಿತಿ ಬಿ.ಶಿವಶಂಕರ್,ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಚರಿತ ಸುಜನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net