

ಶಿರಸಿ: ಜೀವನದುದ್ದಕ್ಕೂ ಧರ್ಮವನ್ನು ಅನುಸರಿಸಿ ಹೋಗುತ್ತಿರಬೇಕು. ಆಗ ಜೀವನದ ಕೊನೆಯ ಪರೀಕ್ಷೆಯಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಲು ಸಾಧ್ಯವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಚಾತುರ್ವಸ್ಯ ವ್ರತಾಚರಣೆ ವೇಳೆ ಚಿನ್ನಾಪುರ ಸೀಮೆಯ ಶಿಷ್ಯ ಭಕ್ತರು ಸಲ್ಲಿಸಿದ ಸೇವೆ ಸ್ವೀಕರಿಸಿ ಅವರು ಮಾತನಾಡಿದರು. ಧರ್ಮವೇ ಗಟ್ಟಿಯಾದ ಪುರುಷಾರ್ಥ. ಧರ್ಮದ ಸಂಪಾದನೆಗೆ ಮಹತ್ವ ಕೊಡಬೇಕು. ಧರ್ಮವೂ ಇಹ, ಪರಗಳಲ್ಲಿ ನಮ್ಮನ್ನು ರಕ್ಷಿಸುತ್ತದೆ ಎಂದರು. ಜೀವನದ ಪರೀಕ್ಷೆಯಲ್ಲಿ ಮೊದಲಿಂದಲೂ ಪ್ರಯತ್ನ ಸರಿಯಾಗಿರಬೇಕು. ಮೊದಲು ಮಾಡಿದ ಸಿದ್ಧತೆಗಳೆಲ್ಲವೂ ಪರೀಕ್ಷೆಯ ಹೊತ್ತಿಗೆ ಸಿದ್ಧತೆ ಕೊರತೆಯ ಕಾರಣ ಹಿಂದೆ ಮಾಡಿದ ಸಾಧನೆಗಳು ಅರ್ಧ ನಮ್ಮ ಕೈ ಬಿಟ್ಟು ಹೋಗಿಬಿಡುತ್ತವೆ ಎಂದರು.
ಮರಣದ ಕ್ಷಣ ಬಂದಾಗ ಎಲ್ಲವೂ ದುರ್ಬಲವಾಗುತ್ತದೆ. ಹಾಗೆ ಆಗದಿರಲು ಹೆಚ್ಚಿಗೆ ಸಾಧನೆ ಮಾಡಿಕೊಂಡಿರಬೇಕು. ಶರೀರ ದುರ್ಬಲವಾದ ಸ್ಥಿತಿಯಲ್ಲಿ ಮರಣ ಬರುತ್ತದೆ. ಆ ಸ್ಥಿತಿಯಲ್ಲಿ ಶರೀರ ಮತ್ತು ಮನಸು ತುಂಬಾ ದುರ್ಬಲವಾಗಿ ಬಿಡುತ್ತವೆ. ಹಿಂದೆ ಮಾಡಿದ ಸಾಧನೆಗಳು ಕಮ್ಮಿಯೇ ಆಗುತ್ತವೆ. ಆದರೆ, ಭಗವಂತನ ಮಾತಿನಂತೆ ಭಕ್ತಿ ಮತ್ತು ಅಭ್ಯಾಸ ಬಲವನ್ನು ಜೀವನದುದ್ದಕ್ಕೂ ಮಾಡಿದರೆ ಮರಣವೆಂಬ ಪರೀಕ್ಷೆಯನ್ನು ಸರಿಯಾಗಿ ಪಾಸ್ ಮಾಡಲು ಸಾಧ್ಯ ಎಂದರು.
ಭಗವಂತನು ಮರಣ ಎಂಬ ಪರೀಕ್ಷೆಯನ್ನು ಕೊಡುವ ಮೊದಲು ಸಣ್ಣ ಕಿರು ಪರೀಕ್ಷೆಯನ್ನು ಮಾಡುತ್ತಾನೆ. ಅನಾರೋಗ್ಯಗಳು, ಯಾವುದೋ ಸಮಸ್ಯೆಗಳು ಹೀಗೆ. ಇಂತಹ ಅನೇಕ ಸಣ್ಣ ಪರೀಕ್ಷೆಗಳನ್ನು ಮಾಡುತ್ತಾನೆ. ಅನಾರೋಗ್ಯಗಳು ಕಲಿಸುವ ಪಾಠ ಅನೇಕ. ಭಯವನ್ನು ನಿವಾರಣೆ ಮಾಡಿಕೊಳ್ಳಬೇಕು, ಶರೀರವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ. ಆದರೆ, ಆಗ ಕಲಿತ ಪಾಠವನ್ನು ಯಾವತ್ತೂ ಮರೆಯಬಾರದು. ಕೊನೆಯ ಪರೀಕ್ಷೆಯನ್ನು ಒಬ್ಬನೇ ಎದುರಿಸುವುದು ಅನಿವಾರ್ಯ ಮತ್ತು ಸಹಜ ಎಂದರು.
ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು. ಚಿನ್ನಾಪುರ ಸೀಮೆಯ ಎರಡು ಭಾಗದ ಶಿಷ್ಯರು ಗಾಯತ್ರಿ ಜಪ, ಮಾತೆಯರು ಕುಂಕುಮಾರ್ಚನೆ ನಡೆಸಿದರು. ಪ್ರಮುಖರಾದ ನಾರಾಯಣ ಹೆಗಡೆ, ದತ್ತಾತ್ರೇಯ ಹೆಗಡೆ, ಸುಬ್ರಹ್ಮಣ್ಯ ಭಟ್, ರವೀಂದ್ರ ಕೊಮಾರ ಇತರರು ಇದ್ದರು.