

ಕಡೂರು: ವಿದ್ಯಾರ್ಥಿಗಳು ಸಂಯಮ, ಸಂಸ್ಕಾರ ಹಾಗೂ ಸಮಯ ಪ್ರಜ್ಞೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ.ಸಿ.ಎಂ.ಸುಲೋಚನಾ ತಿಳಿಸಿದರು.
ಗಿರಿಯಾಪುರ ಗ್ರಾಮದ ಗುರುಕೃಪಾ ಶಾಲಾ ಅವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಮನೆ ಅಂಗಳದಲ್ಲಿ ಶ್ರಾವಣ ಸಂಭ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಗುರುಕುಲಗಳಲ್ಲಿ ಅಭ್ಯಾಸ ಮಾಡಿದರೆ ಶ್ರದ್ಧೆ , ವಿವೇಚನೆ ಮತ್ತು ಸಂಸ್ಕಾರಗಳು ಮೈಗೂಡಿಸಿಕೊಳ್ಳಲು ಸಾಧ್ಯವಿದೆ ಅಂಕಗಳಿಕೆ ಜತೆ ಜೀವನದ ಮೌಲ್ಯಗಳಿಗೂ ಆದ್ಯತೆ ನೀಡಬೇಕು ಎಂದರು.
ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸ ನಮ್ಮೆಲ್ಲರ ಜೀವನದಲ್ಲಿ ಅತ್ಯುತ್ತಮವಾದ ಸಂದರ್ಭವಾಗಿದೆ. ಈ ಮಾಸದಲ್ಲಿ ನಾವುಗಳು ವಿಶೇಷವಾಗಿ ಶರಣರ ಚಿಂತನೆಗೆ ಹೆಚ್ಚು ಮಹತ್ವ ನೀಡುವ ಜತೆಗೆ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತೇವೆ. ಈ ಮೂಲಕ ಶರಣರ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಸಂಸ್ಕಾರ ಜೀವನ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಜಿ.ಶ್ರೀಕಂಠಪ್ಪ, ಚಿಕ್ಕನಲ್ಲೂರು ಪರಮೇಶ್, ಕೋಶಾಧ್ಯಕ್ಷ ಪ್ರಕಾಶ್, ಲತಾ ರಾಜಶೇಖರ್, ಹಿರೇನಲ್ಲೂರು ಹೋಬಳಿ ಘಟಕದ ಅಧ್ಯಕ್ಷ ಶಿವಲಿಂಗ ಸ್ವಾಮಿ, ಸಿ.ಎಂ ಕ್ಷೇತ್ರಪಾಲ್, ಬಿ.ರಾಜಪ್ಪ, ಮಂಜುಳಾ ಜಯಣ್ಣ, ಚಂದ್ರಮೌಳಿ, ಶ್ರೀಗುರು ಕೃಪಾ ಪ್ರೌಢಶಾಲೆ ಅಧ್ಯಕ್ಷ ಜಯ ಸೋಮನಾಥ, ಜಿ.ಪಿ.ಪ್ರಭುಕುಮಾರ್, ಜಿಎಂಎನ್ ಸ್ವಾಮಿ, ಜಿಎಂ ಬಸವರಾಜಪ್ಪ ಹಾಗೂ ಗ್ರಾಮಸ್ಥರು ಇದ್ದರು.