

ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರು ಓದಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದಲೇ ಇಂದು ವಿಶ್ವದ ಮಹಾನ್ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಂದು ಶಿಕ್ಷಣ ಪಡೆಯಲು ಸಾಕಷ್ಟು ಸಂಕಷ್ಟ ಪಡೆಯಬೇಕಿತ್ತು. ಆದರೆ ಈಗ ಶಿಕ್ಷಣ ಪಡೆಯಲು ಅನೇಕ ಸೌಲಭ್ಯಗಳಿದ್ದು, ಇದನ್ನು ಎಲ್ಲ ವಿದ್ಯಾರ್ಥಿಗಳು ಬಳಸಿಕೊಂಡು ಓದಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮೈಸೂರು ನಗರದ ಉಪ ಪೊಲೀಸ್ ಆಯುಕ್ತ ಕೆ.ಎಸ್.ಸುಂದರರಾಜು ಮನವಿ ಮಾಡಿದರು.
ಪಟ್ಟಣದ ಭೀಮನಗರ ಬಡಾವಣೆಯ ಆದಿಕರ್ನಾಟಕ ಜನಾಂಗದ ನಿವೇಶನದಲ್ಲಿ ಸೋಮವಾರ ಸಂಜೆ 134ನೇ ಅಂಬೇಡ್ಕರ್ ಜಯಂತಿ ಸಂಬಂಧ ಆಯೋಜಿಸಿದ್ದ ಗೀತಗಾಯನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಕೊಳ್ಳೇಗಾಲದ ನಿವಾಸಿ. ಅದಕ್ಕಾಗಿ ಕೊಳ್ಳೇಗಾಲ ಎಂದರೆ ಹೆಮ್ಮೆ, ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ನಮ್ಮೆಲ್ಲರಿಗೂ ತಿಳಿಸಿಕೊಟ್ಟಿದ್ದಾರೆ. ನಾವು ಶಿಕ್ಷಣ ಪಡೆಯುವಲ್ಲಿ ಹಿಂದುಳಿದರೆ ಬದುಕಿನಲ್ಲೂ ಹಿಂದುಳಿಯುತ್ತೇವೆ ಎಂದರು. ಅಂಬೇಡ್ಕರ್ ಜಯಂತಿ ಅಂಗವಾಗಿ ಕೊಳ್ಳೇಗಾಲ ಮದುವಣಗಿತ್ತಿಯಂತೆ ಕಂಗೊಳಿಸಿದೆ. ದಸರಾ ಮಾದರಿ ದೀಪಾಲಂಕಾರ ಜನರ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಡಿವೈಎಸ್ಪಿ ಎಚ್.ಕೆ.ಮಹಾನಂದ ಮಾತನಾಡಿ, ಅಂಬೇಡ್ಕರ್ ಅವರು ನಮ್ಮೆಲ್ಲರ ಪಾಲಿಗೂ ದೇವರಿದ್ದಂತೆ. ಅವರ ಜಯಂತಿ ವೇಳೆ ನಾವೆಲ್ಲರೂ ಅವರ ತತ್ಪಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಭೀಮನಗರದಲ್ಲಿ 4 ದಿನಗಳು ಉತ್ತಮ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಜರುಗಿದೆ. ಕಾನೂನು ಅರಿವು ಕಾರ್ಯಕ್ರಮ, 103 ಜನರಿಂದ ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಪ್ರತಿಭಾ ಪುರಸ್ಕಾರ ನಡೆಸಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಭೀಮನಗರ, ಜಿ.ಪಿ.ಮಲ್ಲಪ್ಪಪುರಂ, ಸಿದ್ದಾರ್ಥನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ 56ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕೊಳ್ಳೇಗಾಲದ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶಿವಮಾದಯ್ಯ ಅವರು ಅಂಬೇಡ್ಕರ್ ಅವರ ಕುರಿತು ಗೀತೆ ಹಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಣಾ ಸಮಿತಿ ಸಂಚಾಲಕ ಚಿಕ್ಕ ಮಾಳಿಗೆ, ಎಂ.ವರದರಾಜು, ನಟರಾಜು, ಮಹದೇವಸ್ವಾಮಿ, ನಟರಾಜ್ ಮಾಳಿಗೆ, ಎಸ್.ಸುಂದರಮೂರ್ತಿ, ನಿಂಪು ರಾಜೇಶ್, ಎಸ್.ರಾಜಶೇಖರಮೂರ್ತಿ, ಎಸ್.ರಮೇಶ್, ಸಿದ್ದಾರ್ಥ, ಲಿಂಗರಾಜು, ಸಿದ್ದಪ್ಪಾಜಿ, ನಟರಾಜು, ಚಂದು, ಶಂಕರ್, ಚೇತನ್ ಸೇರಿದಂತೆ ಇತರರು ಇದ್ದರು.