ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ: ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ

25
Published on

ಮೈಸೂರು: ಶಿಕ್ಷಣಕ್ಕೆ ಮಹತ್ವವಾದ ಶಕ್ತಿ ಇದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸಾಧನೆಗಳ ಮೂಲಕ ಇನ್ನೊಬ್ಬರ ಹೃದಯ ಗೆಲ್ಲುವಂತೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಎಂದು ಹೇಳಿದರು.
ಮಾನಸ ಗಂಗೋತ್ರಿಯ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಮಾನಸ ಗಂಗೋತ್ರಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದರು. ನಾನು ಬಡತನದಲ್ಲಿ ಬೆಳೆದು ಕಷ್ಟಪಟ್ಟು ಓದಿ ನಿಮ್ಮ ಮುಂದೆ ಎಂ.ಎಲ್.ಸಿ ಆಗಿ ನಿಲ್ಲಲು ಶಿಕ್ಷಣವೇ ಕಾರಣ. ಪ್ರತಿಯೊಬ್ಬ ಮನುಷ್ಯನಿಗೂ ನಾಗರಿಕತೆ ಇರಬೇಕು. ಸಮಾಜವನ್ನು ಹೇಗೆ ಬದಲಾವಣೆ ಮಾಡಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಅಧಿಕಾರ ಇರಬೇಕು. ಅಧಿಕಾರ ಬರಬೇಕಾದರೆ ಶಿಕ್ಷಣ ಅಗತ್ಯ ಎಂದರು.
ಮೈಸೂರು ವಿವಿಯಿಂದ ಸಂಸ್ಥೆಗೆ ಪ್ರತಿವರ್ಷ ಬರುತ್ತಿರುವ 20 ಲಕ್ಷ ರೂ.ಅನುದಾನವನ್ನು ಇನ್ನೂ ಒಂದು ವರ್ಷ ಮುಂದುವರಿಸಲು ಕುಲಪತಿ ಅವರೊಂದಿಗೆ ಮಾತನಾಡುತ್ತೇನೆ. ಮುಂದಿನ ವರ್ಷದಿಂದ ನನ್ನ ಅನುದಾನದಲ್ಲಿ ಸಂಸ್ಥೆಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಹಣ ಮತ್ತು ರಕ್ತ ಒಂದೇ ಕಡೆ ನಿಲ್ಲಬಾರದು. ಅದು ನದಿಯಂತೆ ಹರಿಯುತ್ತಿರಬೇಕು. ಹಳೆಯ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಇಲಾಖೆ, ದೇಶ, ವಿದೇಶಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಸ್ನೇಹ, ಸಂಬಂಧಗಳನ್ನು ಬೆಸೆಯುವ ಹಳೇ ವಿದ್ಯಾರ್ಥಿ ಸಂಘವನ್ನು ಎಲ್ಲರೂ ಸೇರಿಕೊಂಡು ಕಟ್ಟಿ ಬೆಳೆಸಬೇಕು ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ಪ್ರೊ.ಬಿ.ಕೆ.ಜಗದೀಶ್, ಮುಖ್ಯ ಶಿಕ್ಷಕರಾದ ಸಿ.ಎ.ಚಿಂದೇಗೌಡ, ಪಿ.ಆರ್.ಪದ್ಮಾ, ಅಧ್ಯಕ್ಷ ಕೆ.ಪಿ.ದಿವಾಕರ್, ಉಪಾಧ್ಯಕ್ಷ ಹರೀಶ್ ಮೊಗಣ್ಣ, ಕಾರ್ಯದರ್ಶಿ ಎಂ.ರಮೇಶ್, ಬಸವಯ್ಯ, ಸಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net