ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ

KMT SAMAVESHA
Published on

ಕುಮಟಾ: ಅಭಿವೃದ್ಧಿ ಮತ್ತು ಸಮಾಜ ಸುಧಾರಣೆಯಲ್ಲಿ ನಮ್ಮ ಸುತ್ತಮುತ್ತಲೂ ಉತ್ತಮ ಪೈಪೋಟಿ ಇರಬೇಕು. ನಮ್ಮ ಜಿಲ್ಲೆಯ ಮನುವಿಕಾಸ ಸಂಸ್ಥೆ ಅಂಥ ಸ್ಪರ್ಧಾತ್ಮಕತೆಗೆ ಪ್ರೇರಣೆಯಾಗಿದ್ದು, ಮಹಿಳೆಯರು ಸ್ವಾವಲಂಬಿಯಾಗುವಂತೆ ಪ್ರೋತ್ಸಾಹಿಸಿ, ತರಬೇತಿ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಮಣಕಿಯ ಗ್ರಾಮ ಒಕ್ಕಲು ಸಭಾಭವನದಲ್ಲಿ ಮಂಗಳವಾರ ಮನುವಿಕಾಸ ಸಂಸ್ಥೆ ಮತ್ತು ಈಡಲ್​ಗೀವ್ ಫೌಂಡೇಷನ್​ನ ಸ್ವಸಹಾಯ ಸಂಘಗಳ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದರು.

ಕಮಲಾ ಬಾಳಿಗಾ ಪ್ರಶಿಕ್ಷಣ ಕಾಲೇಜಿನ ಪ್ರಾಚಾರ್ಯು ಡಾ. ಪ್ರೀತಿ ಭಂಡಾರಕರ ಮಾತನಾಡಿ, ಸಂಸಾರದಿಂದ ಸಮಾಜ ನಿರ್ವಣದ ಹೊಣೆ ಮಹಿಳೆಯರ ಮೇಲಿದ್ದು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ರಾಜ್ಯ ಕಾರ್ಯಕಾರಿ ಸದಸ್ಯ ಸೂರಜ ನಾಯ್ಕ ಮಾತನಾಡಿ, ಕಷ್ಟದ ಬದುಕಿಗೆ ವಿಕಾಸದ ಮಾರ್ಗವನ್ನು ಸಂಸ್ಥೆಯು ತೋರಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ತಾಪಂ ಇಒ ರಾಜೇಂದ್ರ ಭಟ್, ಕೆನರಾ ಬ್ಯಾಂಕ್ ಆರ್​ಸೆಟಿ ನಿರ್ದೇಶಕ ರಾಜು ಕಲ್ಲಪ್ಪ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಆನಂದ ಕೊಂಡ್ಲಿ, ಪಿಎಸ್​ಐ ಸಾವಿತ್ರಿ ನಾಯ್ಕ, ಸಿಡಿಪಿಒ ಶೀಲಾ ಪಾಟೀಲ, ಕಮಲಾ ಬಾಳಿಗಾ ಪ್ರಶಿಕ್ಷಣ ಕಾಲೇಜು ಪ್ರಾಚಾರ್ಯು ಡಾ. ಪ್ರೀತಿ ಭಂಡಾರಕರ, ಉದ್ಯಮಿ ಸುಜಾತಾ ಕಾಮತ, ಜಿಲ್ಲಾ ಅಗ್ರಣೀಯ ಬ್ಯಾಂಕಿನ ಅಧಿಕಾರಿ ಕುಲಕರ್ಣಿ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಉತ್ತಮ ಸ್ವ ಉದ್ಯಮಶೀಲರು ಹಾಗೂ ಮಾದರಿ ಸ್ವಸಹಾಯ ಸಂಘಗಳಿಗೆ ಗೌರವಿಸಲಾಯಿತು. ಸ್ವ ಉದ್ಯಮಿಗಳಾದ ಮಂಗಲಾ ಗೌಡ, ಶೋಭಾ ಹರಿಕಾಂತ, ಅಪರ್ಣಾ ಪಡ್ತರ್, ಗಾಯತ್ರಿ ಆಚಾರಿ, ಕಲ್ಪನಾ ನಾಯ್ಕ, ಲಲಿತಾ ಮಡಿವಾಳ, ಕಮಲಾ ಗೌಡ ಅನಿಸಿಕೆ ಹಂಚಿಕೊಂಡರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ನೆಲ್ಲಿಕೇರಿ ಶಾಂತಿಕಾ ಸ್ವಸಹಾಯ ಸಂಘದ ಸದಸ್ಯರಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವತ್ಥ ನಾಯ್ಕ, ಗೀತಾ ನೀಲೇಕಣಿ, ಸೃಜನ್ ನಿರೂಪಿಸಿದರು. ಮನುವಿಕಾಸದ ವಲಯ ನಿರ್ವಾಹಕ ನವೀನ ನಾಯ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net