ಆಯುರ್ವೇದ ವಿವಿಗೆ ಅನುದಾನ ನೀಡಿ: ಬಿವೈಆರ್ ಒತ್ತಾಯ

B y Raghavendra3)
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಕ್ಷೇತ್ರದ ಲೋಕಸಭಾ ಸದಸ್ಯ.
Published on

ಶಿವಮೊಗ್ಗ: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಶಿವಮೊಗ್ಗದಲ್ಲಿ ಆಯುರ್ವೇದ ವಿವಿ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಿತ್ತು. ಈ ಬಾರಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅನುದಾನ ಮೀಸಲಿಟ್ಟು ವಿವಿ ಆರಂಭಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಈ ಸರ್ಕಾರ ಹಿಂದಕ್ಕೆ ಪಡೆದಿದೆ. ಬಜೆಟ್‌ನಲ್ಲಿ ಅದನ್ನು ಮತ್ತೆ ಮಂಜೂರು ಮಾಡಬೇಕು. ಅದೇ ರೀತಿ, ರೈಲ್ವೆ ಹಾಗೂ ಹೆದ್ದಾರಿ ಯೋಜನೆಗಳಿಗೂ ರಾಜ್ಯ ಸರ್ಕಾರ ತನ್ನ ಪಾಲನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ಬಜೆಟ್ ಮಂಡನೆಯಾದ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದರು.
ಲೋಕಸಭಾ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇನೆ. ಕ್ಷೇತ್ರದಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರೊಂದಿಗೆ ಸಮಯ ಕಳೆಯುತ್ತಿದ್ದೇನೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವವರಲ್ಲ ನಾವು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವನ್ನೂ ಮಾಡುವವರಲ್ಲ. ಚುನಾವಣೆಗೆ ಸಿದ್ಧತೆ ಪೂರ್ಣಗೊಂಡಿದೆ. ಕಾರ್ಯಕರ್ತರು ಅತ್ಯುತ್ಸಾಹದಲ್ಲಿದ್ದಾರೆ. ರಾಷ್ಟ್ರೀಯ ವಿಚಾರ ಹಾಗೂ ಅಭಿವೃದ್ಧಿಯನ್ನು ಚುನಾವಣಾ ವಿಷಯವಾಗಿ ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net