ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ

23 MANVI 01
ಮಾನ್ವಿ ಸಾರ್ವಜನಿಕ ಆಸ್ಪತ್ರೆಗಳಿಗೆ ಜಿಲ್ಲಾ ಸಹಾಯಕ ಆಯುಕ್ತ ಗಜನಾನ ಬಾಲೆ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ತಹಸೀಲ್ದಾರ್ ರಾಜುಪಿರಂಗಿ, ಸಮಾಜ ಕಲ್ಯಾಣಾಧಿಕಾರಿ ನಟರಾಜ, ಪ.ಪಂಗಡ ಕಲ್ಯಾಣಾಧಿಕಾರಿ ಮಹಾಲಿಂಗಪ್ಪ ಇಂಗಳದಾಳ, ಅಲ್ಪ ಸಂಖ್ಯಾತ ಇಲಾಖೆ ಅಧಿಕಾರಿ ವೆಂಕಟೇಶ ಇತರರಿದ್ದರು.
Published on

ಮಾನ್ವಿ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರಗೆ ಸಹಾಯಕ ಆಯುಕ್ತ ಗಜನಾನ ಬಾಲೆ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಆಸ್ಪತ್ರೆ ವಿವಿಧ ವಾರ್ಡ್, ಡಯಾಲಿಸಿಸ್ ಕೇಂದ್ರ, ಆಕ್ಸಿಜನ್ ಘಟಕ, ಶುದ್ಧ ಕುಡಿಯುವ ನೀರಿನ ಘಟಕ ಇತರೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಪುರಸಭೆ ಪೈಪ್‌ಲೈನ್ ಮೂಲಕ ಆಸ್ಪತ್ರೆಗೆ ನೀರು ಹರಿಸುವ ವ್ಯವಸ್ಥೆ ಮಾಡಿದರೆ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ತಾಯಿ-ಮಕ್ಕಳ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ತಾಲೂಕು ವೈದ್ಯಾಧಿಕಾರಿ ಶರಣಬಸವ ಪಾಟೀಲ್‌ಗೆ ಸೂಚಿಸಿದರು.

ಆಸ್ಪತ್ರೆ ಸುತ್ತ ಇರುವ ಡಬ್ಬಿ ಅಂಗಡಿ ಹಾಗೂ ನಿರುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಆಂಬುಲೆನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಆಸ್ಪತ್ರೆ ಸುತ್ತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಂತೆ ಹೇಳಿದರು.

ತಹಸೀಲ್ದಾರ್ ರಾಜುಪಿರಂಗಿ, ತಾಲೂಕು ವೈದ್ಯಾಧಿಕಾರಿ ಶರಣಬಸವ ಪಾಟೀಲ್, ವೈದ್ಯಾಧಿಕಾರಿ ಶರಣಪ್ಪ, ಕಂದಾಯ ಅಧಿಕಾರಿ ಚರಣಸಿಂಗ್, ಆಸ್ಪತ್ರೆಯ ಸಿಬ್ಬಂದಿ ಇದ್ದರು.

ವಸತಿ ನಿಲಯಕ್ಕೆ ಭೇಟಿ: ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಪರಿಶಿಷ್ಟ ಜಾತಿ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯ, ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸರ್ಕಾರಿ ಪರಿಶಿಷ್ಟ ಪಂಗಡ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಜಿಲ್ಲಾ ಸಹಾಯಕ ಆಯುಕ್ತ ಗಜಾನನ ಬಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net