ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ

Teachers Day Celabaration
Published on

ಉಪ್ಪಿನಬೆಟಗೇರಿ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ದುಶ್ಚಟಗಳ ದಾಸರಾಗದೆ, ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಬಾಗಲಕೋಟ ತಾಲೂಕಿನ ಶಿರೂರ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಸವದತ್ತಿ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜಿಲ್ಲಾ ಕಾರ್ಯಾಲಯದಿಂದ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ತಂದೆ-ತಾಯಿಗಳು ಮಕ್ಕಳಿಗೆ ಸಂಸ್ಕಾರ ನೀಡಿದರೆ, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರಿಗಿದೆ. ಹೀಗಾಗಿ ಅವರನ್ನು ದೇವರ ಸ್ವರೂಪದಲ್ಲಿ ಕಾಣುತ್ತಾರೆ ಎಂದರು.

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಅಭಿನಂದನೆ ಅರ್ಹರು. ತಂದೆ ಕಲಿಕೆಗೆ ಸಹಕಾರ ನೀಡಿದರೆ, ತಾಯಿ ಊಟ ನೀಡುತ್ತಾಳೆ. ಇವೆಲ್ಲಕ್ಕಿಂತ ಮಿಗಿಲಾಗಿರುವ ಅಕ್ಷರ ಜ್ಞಾನ ನೀಡುವುದು ಶಿಕ್ಷಕರು ಮಾತ್ರ. ಹೀಗಾಗಿ ಶಿಕ್ಷಕರಿಗೆ ಗುರುವಿನ ಸ್ಥಾನ ನೀಡಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಮಾತನಾಡಿ, ದೇಶಕ್ಕೆ ಅನ್ನ ನೀಡುವುದು ರೈತ, ದೇಶ ಹಾಗೂ ನಮ್ಮ ರಕ್ಷಣೆಗಾಗಿ ಹಗಲಿರುಳು ಗಡಿ ಕಾಯುವುದು ನಮ್ಮ ಸೈನಿಕರು, ಅದರಂತೆ ನಮಗೆ ಗುಣಮಟ್ಟದ ಶಿಕ್ಷಣ ನೀಡಿ ಬದುಕಲು ದಾರಿ ತೋರಿಸುವುದು ಶಿಕ್ಷಕರು. ಹೀಗಾಗಿ ಯಾವುದೆ ಕಾರಣಕ್ಕೂ ಈ ಮೂವರನ್ನು ಗೌರವಿಸುವುದನ್ನು ಮರೆಯಬಾರದು ಎಂದರು.

ಉಪ್ಪಿನಬೆಟಗೇರಿ ಅರೇಬಿಕ್ ಶಾಲೆಯ ನಿವೃತ್ತ ಶಿಕ್ಷಕ ಅಬ್ದುಲ್ ಖಾದರ ದೊಡವಾಡ ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಧಾರವಾಡ ಜಿಲ್ಲಾ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಧಾರವಾಡ ಗ್ರಾಮೀಣ ಬಿಇಒ ಆರ್.ಆರ್. ಸದಲಗಿ, ಶಹರ ಬಿಇಒ ಅಶ್ವತ್​ಕುಮಾರ ಶಿಂದಗಿ, ಧಾರವಾಡ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಾಶಪ್ಪ ದೊಡವಾಡ, ಶಿವಲೀಲಾ ಕುಲಕರ್ಣಿ, ನಿವೃತ್ತ ಶಿಕ್ಷಕ ಅಬ್ದುಲ್ ಖಾದರ ದೊಡವಾಡ, ಪ್ರಕಾಶ ಘಾಟಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net