

ರಾಯಚೂರು: ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕೆಲಸ ಮಾಡಬೇಕು. ಉತ್ತಮ ಶಿಕ್ಷಣ ದೊರೆತಾಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಲಿದೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ನಗರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಕೊರತೆಯಿಂದಾಗಿ ನೀವು ಪೌರ ಕಾರ್ಮಿಕರಾಗುವಂತಾಗಿದೆ. ನಿಮ್ಮ ಮಕ್ಕಳು ನಿಮ್ಮಂತಾಗಬಾರದು ಎಂದರೆ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ನೀಡಿದಾಗ ಅವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೌಲಭ್ಯ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಗದೀಶ ಮಾತನಾಡಿ, ಪೌರ ಕಾರ್ಮಿಕರ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಈಡೇರಿಸಲಾಗುವುದು. ಕಡ್ಡಾಯವಾಗಿ ಮಾಸಿಕ ವೇತನ ಪಾವತಿಗೆ ಕ್ರಮಕೈಗೊಳ್ಳಲಾಗುವುದು. ಜೇಷ್ಠತಾ ಪಟ್ಟಿ ತಯಾರಿಸಿ ಮುಂಬಡ್ತಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ, ಪದವಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪೌರ ಕಾರ್ಮಿಕರ ಮಕ್ಕಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಇದಕ್ಕೂ ಮೊದಲು ಏಕ್ ಮಿನಾರ್‌ನಿಂದ ನಗರಸಭೆ ಕಾರ್ಯಾಲಯದವರೆಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಈ.ಶಶಿರಾಜ, ನಾಗರಾಜ, ಪೌರಾಯುಕ್ತ ಗುರುಸಿದ್ದಯ್ಯ, ವ್ಯವಸ್ಥಾಪಕ ರಾಜು, ಅಕಾರಿಗಳಾದ ಕೃಷ್ಣಾ ಕಟ್ಟಿಮನಿ, ಶಕೀಲ್, ಪೌರ ಕಾರ್ಮಿಕರ ಸಂಘದ ಭೀಮಣ್ಣ, ನರಸಿಂಹಲು ಉಪಸ್ಥಿತರಿದ್ದರು.