

ರಾಯಚೂರು: ವಿಶ್ವಕರ್ಮ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕುಲ ಕಸುಬು ಕಲಿಸುವುದರ ಜತೆಗೆ ಅವರಿಗೆ ಉತ್ತಮ ಶಿಕ್ಷಣ ನೀಡಲು ಮುಂದಾದಾಗ ಮಾತ್ರ ಸಮಾಜ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ್ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅವರು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಾಯಕವೇ ಕೈಲಾಸವೆಂದು ನಂಬಿದ ಮಹಾನ್ ವ್ಯಕ್ತಿ ವಿಶ್ವಕರ್ಮರಾಗಿದ್ದು, ಅವರು ಸಮಾಜಕ್ಕೆ ನೀಡಿದ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಇಂದಿನ ಮಕ್ಕಳು ವಿದ್ಯಾಭ್ಯಾಸ ಜತೆಗೆ ತಮ್ಮ ಕುಲಕಸುಬು ಕಲಿತುಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಮುಖಂಡ ಈಶ್ವರ ವಿಶ್ವಕರ್ಮ ಮಾತನಾಡಿ, ಸಮಾಜದ ಪರಿವರ್ತನೆಗಾಗಿ ಹಲವಾರು ಅವತಾರಗಳನು ಎತ್ತಿದ ವಿಶ್ವಕರ್ಮರು ಜಗತ್ತನ್ನು ಸೃಷ್ಠಿಸಿದ ಮಹಾನ್ ಪುರುಷರಾಗಿದ್ದಾರೆ. ವೇದಗಳು ಸೃಷ್ಠಿಯ ಅನುಕ್ರಮವನ್ನು ತೋರಿಸುವ ಜ್ಞಾನ ವಿಜ್ಞಾನವಾಗಿದ್ದು, ಅಂತಹ ಜ್ಞಾನವನ್ನು ಸೃಷ್ಠಿಸಿದ ವಿಶ್ವಕರ್ಮರು ಜಗತ್ತಿಗೆ ಕಾಯಕ ಪ್ರಜ್ಞೆಯನ್ನು ಕಲಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ವಿಶ್ವಕರ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಸಚಿವ ಎನ್.ಎಸ್.ಬೋಸರಾಜು, ಶಾಸಕ ಬಸನಗೌಡ ದದ್ದಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಮಾಜದ ಮುಖಂಡರಾದ ಬ್ರಹ್ಮಗಣೇಶ, ಮಾರುತಿ ಬಡಿಗೇರ, ಕೆ.ರಾಮು ಗಾಣಧಾಳ, ಡಾ.ವೆಂಕಟೇಶ ಅನ್ವರಿ, ಡಾ.ಮನೋಹರ ಪತ್ತಾರ, ಮನೋಹರ ಬಡಿಗೇರ, ಈರಣ್ಣ ಬಡಿಗೇರ ಉಪಸ್ಥಿತರಿದ್ದರು.