

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಲ್ಲಿ ಅಗಾಧ ಸಕಾರಾತ್ಮಕ ಶಕ್ತಿ ಇರುತ್ತದೆ. ಆ ಶಕ್ತಿಗೆ ಒಳ್ಳೆ ಸಂಸ್ಕಾರ ನೀಡಿದರೆ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕ ಆರ್.ಸಿ. ಹಲಗತ್ತಿ ಅಭಿಪ್ರಾಯಪಟ್ಟರು.
ಸಾವಿತ್ರಿಬಾಯಿ ಫುಲೆ ಜನ್ಮ ದಿನ ನಿಮಿತ್ತ ನಗರದ ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ಮಕ್ಕಳ ಪ್ರತಿಭೋತ್ಸವ ಹಾಗೂ ಸಾವಿತ್ರಿಬಾಯಿ ಫುಲೆ ಶ್ರೇಷ್ಠ ಸೇವಾ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದು ಪ್ರಶಸ್ತಿಗಳನ್ನು ಬೆನ್ನು ಹತ್ತಿ ಹೋಗುವ ಕಾಲ. ಈ ಸಮಯದಲ್ಲಿ ಯಾವ ಫಲಾಪೇಕ್ಷೆ ಇಲ್ಲದೆ ವಿಶೇಷ ಮಕ್ಕಳ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಕಾರ್ಯ ಸಮಾಜಕ್ಕೆ ಮಾದರಿಯವಾಗಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಶಸ್ತಿ ಪುರಸ್ಕೃತೆ ಜಾಹೀದಾ ಕಾಲೇಖಾನವರ ಸರ್ಕಾರಿ ಸೇವೆಯಲ್ಲಿ ಇದ್ದಾಗಲೂ ಮಕ್ಕಳ ಕಲ್ಯಾಣಕ್ಕೆ ನಿಯಮಾವಳಿ ಬದಿಗಿಟ್ಟು ಕಾರ್ಯ ಮಾಡಿದ್ದರಿಂದ ಇಂದು ಉಣಕಲ್ಲ ಮನೋವೈಕಲ್ಯದ ಬಾಲಕಿಯರ ಬಾಲಮಂದಿರ ಮಾದರಿಯಾಗಿದೆ. ಇವರಿಗೆ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿ ಮೌಲ್ಯ ಹೆಚ್ಚಿದೆ ಎಂದರು.
ಮಲ್ಲಿಕಾರ್ಜುನ ಚಿಕ್ಕಮಠ, ಸ್ನೇಹ ಮಕ್ಕಳ ತೆರೆದ ತಂಗುದಾಣದ ಮುಖ್ಯಸ್ಥೆ ನಾಗರತ್ನಾ ಜಡೇದ ಮಾತನಾಡಿದರು. ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಪ್ರೊ. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಜಾಹೀದಾ ಕಾಲೇಖಾನ ಅವರಿಗೆ ಸಾವಿತ್ರಿಬಾಯಿ ಫುಲೆ ಶ್ರೇಷ್ಠ ಸೇವಾ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆ.ಎಚ್. ನಾಯಕ, ಚಂದ್ರಶೇಖರ ಸಬರದ, ಡಾ. ಎ.ಎಲ್.ದೇಸಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು. ಶಂಕರ ಹಲಗತ್ತಿ ಸ್ವಾಗತಿಸಿದರು. ವಿ.ಎನ್. ಕೀರ್ತಿವತಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.
ನಂತರ ಸ್ನೇಹ ಮಕ್ಕಳ ತೆರೆದ ತಂಗುದಾಣದ ಮಕ್ಕಳು ಮತ್ತು ಹುಬ್ಬಳ್ಳಿಯ ಉಣಕಲ್ ವಿಶೇಷ ಮಕ್ಕಳ ಬಾಲಮಂದಿರದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಜರಗಿದವು.