

ಮೂಡಿಗೆರೆ: ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ ಬೆಳೆಗಾರರ 10 ಹೆಚ್‌ಪಿ ಒಳಗಿನ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಬೆಳೆಗಾರರು ಶುಕ್ರವಾರ ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮಾತನಾಡಿ, ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದರು ಇದುವರೆಗೂ ಕಾರ್ಯರೂಪಕ್ಕೆ ತಂದಿಲ್ಲ. ಈಗ ಕಾಫಿ ಬೆಳೆಗಾರರಿಗೆ ವಿದ್ಯುತ್‌ಬಿಲ್ ನೀಡಿ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿ ಇದುವರೆಗಿನ ಬಿಲ್ಮೊತ್ತವನ್ನು ಮನ್ನಾ ಮಾಡಬೇಕು. ಕೃಷಿ ಸಂಬಂಧಿತ ವಿದ್ಯುತ್ ಬಳಕೆಗೆ ಉಚಿತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
10 ಎಚ್‌ಪಿ ವರೆಗಿನ ಕೃಷಿ ಸಂಬಂಧಿತ ಪಂಪ್‌ಸೆಟ್ಗೆ ನೀಡಲಾದ ವಿದ್ಯುತ್ ಪೂರೈಕೆ ಕಡಿತ ಮಾಡುವುದಿಲ್ಲ ಎಂದು ಅಧಿಕಾರಿಗಳು ಬೆಳಗಾರರಿಗೆ ಭರವಸೆ ನೀಡಿದ್ದರು. ಅವರ ಭರವಸೆಯಂತೆ ಬೆಳೆಗಾರರು ವಿದ್ಯುತ್ ಬಿಲ್ ಪಾವತಿಸಿಲ್ಲ . ಈಗ ವಿದ್ಯುತ್ ಪೊರೈಕೆ ಕಡಿತಗೊಳಿಸುತ್ತಿದ್ದಾರೆ. ಇದರಿಂದ ಕಾಫಿ ಸಂಸ್ಕರಣೆ ಮಾಡುವ ಯಂತ್ರ ಸ್ಥಗಿತಗೊಂಡಿದೆ. ಅಡಕೆ, ಕಾಫಿ, ಕಾಳುಮೆಣಸು, ಏಲಕ್ಕಿ ಗಿಡಗಳಿಗೆ ನೀರು ಹರಿಸಲು ವಿದ್ಯುತ್ ಸಂಪರ್ಕ ಇಲ್ಲದಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ಇದರಿಂದ ಬೆಳೆ ಒಣಗುತ್ತಿದೆ. ರೈತರ ಅದಾಯದ ಮೂಲವನ್ನು ಮೆಸ್ಕಾಂ ಅಧಿಕಾರಿಗಳು ಹೊಸಕಿ ಹಾಕುತ್ತಿದ್ದಾರೆ ಎಂದು ದೂರಿದರು.
ತಾಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷಣಗೌಡ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥ ಗೌಡ, ಕೃಷಿಕರಾದ ಪ್ರಮೋದ್ ದುಂಡುಗ, ರಾಮಕೃಷ್ಣ, ಗಿರೀಶ್ , ರಾಜು, ಭರತ್, ನಯನ ತಳವಾರ, ಪ್ರಕಾಶ್ ಬಕ್ಕಿ ಇತರರಿದ್ದರು.