ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿ

11SPT3
ಸೋಮವಾರಪೇಟೆ ಸಫಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಮಾತನಾಡಿದರು. ದಿನೇಶ್, ಸುಭಾಷ್, ಹೂವಯ್ಯ ಇದ್ದರು.
Published on

ಸೋಮವಾರಪೇಟೆ: ಜಿಲ್ಲೆಯ ಕಾಫಿ ಬೆಳೆಗಾರರ 10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಆದೇಶವನ್ನು ಸರ್ಕಾರ ಕೂಡಲೇ ಹೊರಡಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮನವಿ ಮಾಡಿದರು.

ಪಟ್ಟಣದ ಸಫಾಲಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಕಾಫಿ ಫಸಲು ಹಾನಿಯಾಗಿದೆ. ಕಾಫಿ ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಪಂಪ್‌ಸೆಟ್‌ಗಳ ಬಾಕಿ ಬಿಲ್ ಮನ್ನಾ ಮಾಡಬೇಕು. ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು, ಮುಖ್ಯಮಂತ್ರಿಗಳಿಗೆ, ಇಂಧನ ಸಚಿವರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಮನವರಿಕೆಯೊಂದಿಗೆ ಒತ್ತಡ ಹೇರಬೇಕು ಎಂದು ಹೇಳಿದರು.

ಈಗಾಗಲೇ ಕಾಫಿ ಬೆಳೆಗಾರರ ಎಲ್ಟಿ4ಸಿ ವಿದ್ಯುತ್ ಸಂಪರ್ಕವನ್ನು ಬಿಲ್ ಪಾವತಿಸದ ನೆಪವೊಡ್ಡಿ ಕಡಿತಗೊಳಿಸಲು ಸೆಸ್ಕ್ ಸಿದ್ಧತೆ ಮಾಡಿಕೊಂಡಿದೆ. ಸಂಪರ್ಕ ಕಡಿತಗೊಳಿಸಿದರೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಸೆಸ್ಕ್ ದುಸ್ಸಾಹಸಕ್ಕೆ ಮುಂದಾದರೆ ಉಗ್ರಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಈ ದೇಶದ ಬೆನ್ನೆಲುಬು. ಆಹಾರ ಬೆಳೆಗಳನ್ನು ಉತ್ಪಾದಿಸುವ ರೈತರಿಗೆ ಸರ್ಕಾರ ರೈತ ಕೇಳಿದ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಮಂಡ್ಯ ಸೇರಿದಂತೆ ಇತರ ಜಿಲ್ಲೆಯ ರೈತರು ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿಲ್ಲ. ಕೊಡಗು ಜಿಲ್ಲೆಗೆ ಏಕೆ ಅನ್ಯಾಯ? ಎಂದು ಪ್ರಶ್ನಿಸಿದರು. ರೈತ ಒಗ್ಗಟ್ಟಾದರೆ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಐದು ತಾಲೂಕಿನ ರೈತರ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಅಕಾಲಿಕ ಮಳೆ, ಹವಾಮಾನ, ಮಣ್ಣಿನಲ್ಲಿ ತೇವಾಂಶದ ವ್ಯತ್ಯಾಸ ಸೇರಿದಂತೆ ಅನೇಕ ಕಾರಣಗಳಿಂದ ಪ್ರತಿವರ್ಷ ಕಾಫಿ, ಕಾಳುಮೆಣಸು, ಭತ್ತ, ಏಲಕ್ಕಿ ಇತ್ಯಾದಿ ಬೆಳೆಗಳ ಫಸಲು ಹಾನಿಯಾಗುತ್ತಿದೆ. ಪ್ರತಿಯೊಂದಕ್ಕೂ ಪರಿಹಾರ ನೀಡಬೇಕು. ರೈತರು ಪ್ರಶ್ನೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರ ಸೌಲಭ್ಯಗಳು ಸಿಗುತ್ತಿಲ್ಲ. ಎಲ್ಲವನ್ನೂ ಹೋರಾಟ ಮೂಲಕವೇ ಪಡೆದುಕೊಳ್ಳಬೇಕು ಎಂದು ಹೇಳಿದರು.

ದುರಸ್ತಿ ವಿಳಂಬ, ಲಂಚಕ್ಕಾಗಿ ಶೋಷಣೆ, ಕಡತಗಳ ವಿಲೇವಾರಿ ವಿಳಂಬ, ಮಳೆಹಾನಿ ಪರಿಹಾರ ನೀಡದಿರುವುದರ ಬಗ್ಗೆ ರೈತರು ಅಳಲು ತೋಡಿಕೊಂಡರು.

ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ತಾಲೂಕು ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net