ನೀರಿನ ಸಮಸ್ಯೆಗೆ ಪ್ರಥಮ ಆದ್ಯತೆ ನೀಡಿ

Give first priority to water problem
ವಿಜಯಪುರ ನಗರ ಹೊರವಲಯದ ಭೂತನಾಳ ಕೆರೆಗೆ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಕಾಮಗಾರಿ ಪರಿಶೀಲಿಸಿದರು. ಮಹಾದೇವ ಮುರಗಿ, ಬದ್ರೂದ್ದಿನ ಸೌದಾಗರ, ಗೋವಿಂದ ರಾಠೋಡ ಇತರರಿದ್ದಾರೆ.
Published on

ವಿಜಯಪುರ: ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪ ಇನ್ನಷ್ಟು ಹೆಚ್ಚಾಗಲಿದೆ. ಜನ ಜಾನುವಾರಗಳಿಗೆ ನೀರಿನ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಿಬೇಕು. ಪೂರ್ವ ಯೋಜನೆಗಳನ್ನು ಪಟ್ಟಿ ಮಾಡಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಮಪರ್ಕವಾಗಿ ಕುಡಿಯುವ ನೀರು ಪೂರೈಸುವಂತೆ ಸಚಿವ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಹೊರವಲಯದ ಭೂತನಾಳ ಕೆರೆಗೆ ಭಾನುವಾರ ಭೇಟಿ ನೀಡಿ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನೀರು ಹರಿಯುವ ಪ್ರಮಾಣ, ನೀರೆತ್ತುವ ಪಂಪ್, ವಿದ್ಯುತ್ ಪರಿಕರಗಳ ಸಾಮರ್ಥ್ಯ ಸೇರಿ ವಿವಿಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿದ ಮಾಹಿತಿ ಪಡೆದ ಅವರು, ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪರ್ಯಾಯ ಮಾರ್ಗದಿಂದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದ್ದು, ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾದ್ಯತೆಯ ಮೇಲೆ ನೀಗಿಸಬೇಕು. ಇನ್ನು ಹೆಚ್ಚುವರಿಯಾಗಿ 8-10 ಮೋಟರ್ ಅಳವಡಿಸಿ ಕೆರೆಗೆ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳಿ ಎಂದರು.

ಪಾಲಿಕೆ ಮತ್ತು ಕೆಬಿಜೆಎನ್‌ಎಲ್ ಅಧಿಕಾರಿಗಳು ಭೂತನಾಳ ಕೆರೆಗೆ ನೀರು ಸಂಗ್ರಹಿಸಲು ಅರಕೇರಿ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಪರ್ಯಾಯ ಮಾರ್ಗದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು.

ಭೂತನಾಳ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಒದಗಿಸಲು ಒಂದು ಪಂಪ್‌ಹೌಸ್ ಇದ್ದು, ಇನ್ನೆರಡು ದಿನದಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವ ಹಿನ್ನೆಲೆಯಲ್ಲಿ ಇನ್ನೊಂದು ಪಂಪ್ ಆರಂಭಿಸಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಸಬೇಕು ಎಂದರು.

ನಗರದಲ್ಲಿರುವ ಎರಡು ಐತಿಹಾಸಿಕ ಭಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲಿನ ನೀರನ್ನು ಗೃಹ ಬಳಕೆಗೆ ಉಪಯೋಗಿಸಲು ಕ್ರಮವಹಿಸಬೇಕು. ನಗರದಲ್ಲಿನ 476 ಕೊಳವೆಬಾವಿ ಮತ್ತು 27 ತೆರೆದ ಬಾವಿಗಳಿಗೆ ಮೋಟರ್ ಅಳವಡಿಸಿ ನಗರದ ಜನರ ದಿನ ಬಳಕೆಗಾಗಿ ಪ್ರತಿದಿನ ನೀರು ಪೂರೈಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net