

ನಾಯಕನಹಟ್ಟಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಕುದಾಪುರದ ಬಿಎಆರ್‌ಸಿ(ಬಾರ್ಕ್) ವಿಜ್ಞಾನ ಸಂಸ್ಥೆಯ ವಿಜ್ಞಾನಿ ಧವಾಮಣಿ ಸಲಹೆ ನೀಡಿದರು.
ಸಮೀಪದ ನೇರಲಗುಂಟೆಯ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಶೂ ವಿತರಿಸಿ ಮಾತನಾಡಿದರು.
ಕುದಾಪುರ ಬಳಿ ಹಲವು ವಿಜ್ಞಾನ ಸಂಸ್ಥೆಗಳು ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಈ ವಿಜ್ಞಾನ ಸಂಸ್ಥೆಗಳ ಕಾರ್ಯವೈಖರಿ, ಸಾಧನೆಗಳನ್ನು ತಿಳಿದುಕೊಳ್ಳಬೇಕು. ಚಿಕ್ಕಂದಿನಿಂದಲೇ ವಿಜ್ಞಾನದ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿಜ್ಞಾನ ವಿಷಯಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು. ಪೂರಕವಾಗಿ ಶಿಕ್ಷಕರು ಮಕ್ಕಳಿಗೆ ಪ್ರಯೋಗಾಲಯ, ವಿಜ್ಞಾನ ಮಾದರಿಗಳು ಸೇರಿ ಹಲವು ವೈಜ್ಞಾನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಭವಿಷ್ಯದಲ್ಲಿ ಈ ಭಾಗದಿಂದ ಹತ್ತಾರು ವಿದ್ಯಾರ್ಥಿಗಳು ವೈಜ್ಞಾನಿಕ ಜಗತ್ತಿಗೆ ಪ್ರವೇಶವಾಗಬೇಕು. ವಿಜ್ಞಾನಿಗಳಾಗಿ ಹಲವು ಸಂಶೋಧನೆಗಳನ್ನು ನಡೆಸಿ ದೇಶಕ್ಕೆ ಕೊಡುಗೆ ನೀಡಬೇಕು. ಇದಕ್ಕೆ ನಮ್ಮ ವಿಜ್ಞಾನ ಸಂಸ್ಥೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದೆ ಎಂದು ಹೇಳಿದರು.
ವಿಜ್ಞಾನಿ ಕಿರಣ್ ಮಾತನಾಡಿ, ಈ ಶಾಲೆಯು ಗ್ರಾಮದ ಹೊರವಲಯದಲ್ಲಿದ್ದು, ನೂರಾರು ವಿದ್ಯಾರ್ಥಿಗಳು ನಿತ್ಯ ನಡೆದು ಶಾಲೆಗೆ ಬರುವುದನ್ನು ಗಮನಿಸಿದ್ದೇವೆ. ಅದರಲ್ಲೂ ಬರಿಗಾಲಿನಲ್ಲಿ ಶಾಲೆಗೆ ಬರುತ್ತಿರುವುದು ಮಕ್ಕಳ ಪಾದಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ನಮ್ಮ ನಮ್ಮ ತಂಡವು ಶಾಲೆಯ 232 ಮಕ್ಕಳಿಗೂ ಶೂ ವಿತರಿಸುವ ಕಾರ್ಯ ಕೈಗೊಂಡಿದೆ ಎಂದರು.
ವಿಜ್ಞಾನಿಗಳಾದ ಅಂಕುಶ್ ಅಗರ್‌ವಾಲ್, ಎ.ಕೆ.ತಿವಾರಿ, ಮಧುಸೂದನ್, ಎ.ರಫಿ, ಯೋಗೇಶ್ ನಾಯಕ್, ಸಾಹಿತ್ ರೆಡ್ಡಿ, ಶುಭಂ, ಮುಖ್ಯಶಿಕ್ಷಕ ಸತ್ಯನಾರಾಯಣ, ಶಿಕ್ಷಕರಾದ ಕೇಶವಮೂರ್ತಿ, ಶೇಕ್ ಮಹಮ್ಮದ್ ಅಬ್ದುಲ್ಲಾ, ಪಿ.ಮಂಜುನಾಥ, ಬಿ.ಟಿ.ತಿಪ್ಪೇರುದ್ರನಾಯಕ, ಜ್ಯೋತಿ, ಒ.ತಿಪ್ಪೇಸ್ವಾಮಿ, ಕಾವ್ಯಶ್ರೀ, ನಿತಿನ್ ಇದ್ದರು.