ರೈತರಿಗೆ ಮೊದಲ ಆದ್ಯತೆ ನೀಡಿ

MRP SUCHANE
Published on

ಕುಂದಗೋಳ: ನಮ್ಮ ಮತಕ್ಷೇತ್ರದಲ್ಲಿ ರೈತರಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿಗಳು ಮುತುವರ್ಜಿ ವಹಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ರೈತರಿಗೆ ಬೆಳೆ ವಿಮೆ ನೋಂದಣಿಯ ಹಾಗೂ ಇತರೆ ಸರಿಯಾದ ಮಾಹಿತಿ ಇರುವುದಿಲ್ಲ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮತ್ತು ಪತ್ರಿಕೆಗಳ ಮೂಲಕ ಇಲಾಖೆಯ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದರು.

ಕೃಷಿಯಲ್ಲಿ ತಾಲೂಕಿನ ಶೇ. 95 ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಅದರಲ್ಲೂ ಮುಂಗಾರು ಬೆಳೆಗಳಲ್ಲಿ ಗೋವಿನಜೋಳವನ್ನೇ ಹೆಚ್ಚಾಗಿ ಬಿತ್ತನೆ ಮಾಡಲಾಗಿದೆ. ಇನ್ನೊಂದು ವಾರ ಮಳೆ ಮುಂದುವರಿದರೆ ಬೆಳೆಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಭಾರತಿ ಮೆಣಸಿನಕಾಯಿ ಅವರು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯಲ್ಲಿ ಸರಿಯಾದ ಫಲಾನುಭವಿಗಳಿಗೆ ಯಾವ ಯೋಜನೆಗಳು ಸಿಗುತ್ತಿಲ್ಲ. ತಮ್ಮ ಇಲಾಖೆಯಲ್ಲಿರುವ ನಾಲ್ಕು ವರ್ಷಗಳ ಫಲಾನುಭವಿಗಳ ಪಟ್ಟಿ ನೀಡುವಂತೆ ಶಾಸಕರು ಇಲಾಖೆಯ ಅಧಿಕಾರಿ ಕರೋಶಿ ಅವರಿಗೆ ಸೂಚಿಸಿದರು.

ಅದೇ ರೀತಿ ಕಾರ್ವಿುಕರ ಇಲಾಖೆಯಲ್ಲಿ ಸೇವಾಸಿಂಧೂ ಅಡಿಯಲ್ಲಿ 13 ಸಾವಿರ ಕಾರ್ವಿುಕರ ನೋಂದಣಿ ಮಾಡಿ, ಅವರ ಮದುವೆಗೆ ಸರ್ಕಾರದಿಂದ 55-60 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಸರ್ಕಾರದ ಗೃಹ ಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್​ಗೆ 25,062 ಜನ ಅರ್ಜಿ ಸಲ್ಲಿಸಿದ್ದು, ಇನ್ನೂ 16,116 ಜನ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರ ಬೇಡಿಕೆಯಲ್ಲಿ 98 ಪ್ರಾಥಮಿಕ ಹಾಗೂ 23 ಪ್ರೌಢಶಾಲೆಗೆ ಶಿಕ್ಷಕರನ್ನು ನೇಮಿಸಿದ್ದು, ಇನ್ನೂ 115 ಶಿಕ್ಷಕರ ಕೊರತೆ, ಅನ್ನ ಭಾಗ್ಯ ಯೋಜನೆಯ ಮಾಹಿತಿ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ಶಾಸಕರಿಗೆ ನೀಡಿದರು.

ತಾಪಂ ಇಒ ಮಹೇಶ ಕುರಿಯವರ, ತಹಸೀಲ್ದಾರ್ ಎಸ್.ಎಸ್. ಪರಮಾನಂದ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಾಲೂಕಿನ ಎಲ್ಲ ಗ್ರಾಮಗಳ ಪಿಡಿಒಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net