ಮಾನವೀಯ ದೃಷ್ಟಿಯಿಂದ ರೈತರಿಗೆ ದಾಖಲೆ ಮಾಡಿಕೊಡಿ

15spt1
Published on

ಸೋಮವಾರಪೇಟೆ: ಕೊಡಗಿನಲ್ಲಿ ಕಂದಾಯ ಭೂಮಿಗೆ ಸೇರಿದಂತೆ 235ರಷ್ಟು ಟೆನ್ಯೂರ್‌ಗಳಿದ್ದು, ಬಹುತೇಕ ರೈತಾಪಿ ವರ್ಗಕ್ಕೆ ಆಸ್ತಿ ದಾಖಲಾತಿಗಳು ದೊರೆಯುತ್ತಿಲ್ಲ. ಮಾನವೀಯ ದೃಷ್ಟಿಯಿಂದ ತಹಸೀಲ್ದಾರ್ ತಮ್ಮ ಅಧಿಕಾರ ಬಳಸಿ ದಾಖಲಾತಿಗಳನ್ನು ವಿಳಂಬ ಮಾಡದೆ ಮಾಡಿಕೊಡಬೇಕೆಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮನವಿ ಮಾಡಿದರು.

ತಾಲೂಕು ಕಚೇರಿಯಲ್ಲಿ ಶನಿವಾರ ತಹಸೀಲ್ದಾರ್ ಕೃಷ್ಣಮೂರ್ತಿ ಅವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಿ ಆ್ಯಂಡ್ ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಭೂಮಿ ಎಂಬುದೆ ಕಂದಾಯ ಇಲಾಖೆಯ ಅಧಿಕಾರಿಗಳ ಸೃಷ್ಟಿಯಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸೇರಿಸಿಕೊಂಡು ಸಿ ಆ್ಯಂಡ್ ಡಿ ಎಂದು ವರ್ಗೀಕರಣ ಮಾಡಿ, ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ, ಸರ್ವೆ ನಡೆಸದೆ ಕಚೇರಿಯಲ್ಲಿ ಕುಳಿತುಕೊಂಡು ಅವೈಜ್ಞಾನಿಕ ವರದಿ ನೀಡಿರುವ ಪರಿಣಾಮ ಈಗ ಅದೇ ದಾಖಲೆಯಾಗಿದೆ.

ಕಂದಾಯ ಇಲಾಖೆ ಮಾಡಿದ ದೊಡ್ಡ ತಪ್ಪಿನಿಂದ ರೈತರು ಬೀದಿ ಪಾಲಾಗುವ ಕಷ್ಟದ ದಿನಗಳು ಬಂದಿವೆ. ಸಿ ಆ್ಯಂಡ್ ಡಿ ಭೂಮಿ ಡೀಮ್ಡ್ ಫಾರೆಸ್ಟ್ ಎಂದು ಪರಿಗಣಿಸಿ ತೆರವಿಗೆ ಸಿದ್ಧತೆ ನಡೆಯುತ್ತಿದೆ. ಇನ್ನಾದರೂ ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ರಾಜ್ಯ ಸರ್ಕಾರಕ್ಕೆ ವಸ್ತುಸ್ಥಿತಿಯನ್ನು ತಿಳಿಸಬೇಕು ಎಂದು ಹೇಳಿದರು.

ಅತಿ ಹೆಚ್ಚು ಸಿ ಆ್ಯಂಡ್ ಡಿ ಭೂಮಿಯನ್ನು ಹೊಂದಿರುವ ಶಾಂತಳ್ಳಿ ಹೋಬಳಿ ಗ್ರಾಮಗಳು ಸೇರಿದಂತೆ, ಜಿಲ್ಲೆಯ ಹೆಚ್ಚಿನ ರೈತರು ಸಿ ಆ್ಯಂಡ್ ಡಿ ಭೂಮಿಯನ್ನು ಹೊಂದಿದ್ದಾರೆ. ಅದರಲ್ಲಿ ವ್ಯವಸಾಯ ಮಾಡುವುದರೊಂದಿಗೆ ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಹಲವು ದಶಕಗಳಿಂದ ಹಕ್ಕುಪತ್ರಕ್ಕೆ ಅರ್ಜಿ ಹಾಕಿಕೊಂಡರೂ ಪ್ರಯೋಜನವಾಗಿಲ್ಲ. ನಿಯಮ ಸರಳೀಕರಿಸಿ ಸದ್ಯಕ್ಕೆ 94 ಸಿ ಮತ್ತು 94 ಸಿಸಿ ವಿಭಾಗದಲ್ಲಿ ಹಕ್ಕುಪತ್ರಗಳನ್ನು ತಹಸೀಲ್ದಾರರು ವಿತರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಗಳಲ್ಲಿ ಸಿ ಆ್ಯಂಡ್ ಡಿ ಭೂಮಿ ಎಲ್ಲಿದೆ. ಅರಣ್ಯ ಭೂಮಿ ಎಲ್ಲಿದೆ. ಎಷ್ಟು ಒತ್ತುವರಿ ಆಗಿದೆ ಎಂಬುದನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಬೇಕು. ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ತೆರವು ಮಾಡಿಸಬಹುದು. ಮೊದಲು ರೈತರ ಅಸ್ತಿಗೆ ಹದ್ದುಬಸ್ತು ಗುರುತಿಸಬೇಕು. ಈ ಬಗ್ಗೆ ಕಂದಾಯ ಮತ್ತು ಅರಣ್ಯ ಸಚಿವರಿಗೆ ಜಿಲ್ಲಾಧಿಕಾರಿಗಳು ಮನವರಿಕೆ ಮಾಡಿಕೊಡಬೇಕು. ತಹಸೀಲ್ದಾರರು ಈ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು. ರೈತಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಮಾದಾಪುರವನ್ನು ಪ್ರತ್ಯೇಕ ಹೋಬಳಿ ಮಾಡಲು ಕಂದಾಯ ಇಲಾಖೆಯಿಂದ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಸಿ ಆ್ಯಂಡ್ ಡಿ ಭೂಮಿ ವಿಚಾರ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಆದರೂ ರೈತರಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಹಕ್ಕುಪತ್ರಕ್ಕೆ ಸಲ್ಲಿಕೆಯಾಗಿರುವ ಯಾವುದೇ ಸಿ ಆ್ಯಂಡ್ ಡಿ ಭೂಮಿಯ ಅರ್ಜಿಯನ್ನು ತಿರಸ್ಕರಿಸಿಲ್ಲ. ಪರಿಶೀಲನೆ ಹಂತದಲ್ಲಿ ಇಟ್ಟಿದ್ದೇವೆ ಎಂದು ತಹಸೀಲ್ದಾರ್ ಹೇಳಿದರು. ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಸಮಿತಿಯ ಉಪಾಧ್ಯಕ್ಷ ಕೆ.ಎನ್.ದೀಪಕ್, ಕಾರ್ಯದರ್ಶಿ ಆದರ್ಶ್, ಪದಾಧಿಕಾರಿಗಳಾದ ಹೆಗ್ಗುಳ ಹೂವಯ್ಯ, ಜಯರಾಮ್, ತ್ರಿಶೂಲ್, ವಸಂತ್, ರವಿ, ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net