ರೈತರಿಗೆ ನ್ಯಾಯಯುತ ಪರಿಹಾರ ನೀಡಲಿ

mysore
Published on

ಮೈಸೂರು; ರೈತರು ಸಂಘಟಿತ ಹೋರಾಟ ನಡೆಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.


ತಾಲೂಕಿನ ಕೂಡನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಫಲವತ್ತಾದ ಕೃಷಿಭೂಮಿಗಳಲ್ಲಿ 220 ಕೆವಿ ಸಾಮರ್ಥ್ಯದ ವಿದ್ಯುತ್ ಮಾರ್ಗ ಹಾದು ಹೋಗುವ ಸಂಬಂಧ ರೈತರಿಗೆ ನ್ಯಾಯಯುತ ಪರಿಹಾರ ಕೊಡದೆ ನಿರ್ಲಕ್ಷೃ ಮಾಡಲಾಗತ್ತಿದೆ. ಸಣ್ಣ ರೈತರು ವಿದ್ಯುತ್ ತಂತಿ ಹಾದು ಹೋಗುವ ಮಾರ್ಗದಿಂದ ಕೃಷಿ ಭೂಮಿ ಕಳೆದುಕೊಂಡರೆ ವಲಸೆ ಹೋಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಮೈಸೂರು ನಗರದ ಸುತ್ತಮುತ್ತ ಇರುವ ಜಮೀನುಗಳಿಗೆ ಹೆಚ್ಚಿನ ಬೆಲೆ ಇದೆ. ಇಂತಹ ಭೂಮಿಗೆ ವಿದ್ಯುತ್ ಇಲಾಖೆಯವರು ಅತಿ ಕಡಿಮೆ ಪರಿಹಾರ ನೀಡಿ ರೈತರನ್ನು ವಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿದರು.


ನ್ಯಾಯಯುತ ಪರಿಹಾರ ನೀಡದೆ ರೈತರ ಜಮೀನಿನ ಒಳಗೆ ಯಾವುದೇ ಗುತ್ತಿಗೆದಾರರು ಪ್ರವೇಶ ಮಾಡದಂತೆ ತಡೆಯಬೇಕು. ರೈತರು ಭಿಕ್ಷೆ ಕೇಳುವುದಿಲ್ಲ. ಕಾನೂನಿನ ಅನ್ವಯ ಪರಿಹಾರ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ರೈತರು ಮನಗಾಣಬೇಕು. ಕೃಷಿ ಸಂಕಷ್ಟದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದು ಹೇಳಿದರು


ಹೋರಾಟ ಸಮಿತಿ ರಚನೆ: ಇದೇ ವೇಳೆ ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಕೂಡನಹಳ್ಳಿ ರಾಜಣ್ಣ, ಅಧ್ಯಕ್ಷರಾಗಿ ಕೆ.ಎಂ.ಸುರೇಶ್, ಕಾರ್ಯದರ್ಶಿಯಾಗಿ ದೇವಲಪುರ ರಾಜಶೇಖರ್, ಸಂಘಟನಾ ಕಾರ್ಯದರ್ಶಿಯಾಗಿ ಕೂಡನಹಳ್ಳಿ ಸೋಮಣ್ಣ, ಜಂಟಿ ಕಾರ್ಯದರ್ಶಿಯಾಗಿ ಪುಟ್ಟಸ್ವಾಮಿ, ಉಪಾಧ್ಯಕ್ಷರಾಗಿ ಕೂಡನಹಳ್ಳಿ ನಿಂಗಣ್ಣಸ್ವಾಮಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ತಾಲೂಕು ಪಂಚಾಯತಿ ಮಾಜಿ ಸದಸ್ಯ ಕೆ.ಎಂ.ಶಂಕರ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್, ಸಾತಗಳ್ಳಿ ಬಸವರಾಜ್, ವರಕೂಡು ನಾಗೇಶ್, ಮಂಜುನಾಥ್, ಪುಟ್ಟಸೋಮಪ್ಪ, ಚಂದ್ರಶೇಖರ್, ಕೆ.ಎನ್.ಬಾಲಸುಬ್ರಹ್ಮಣ್ಯ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net