

ಹುಬ್ಬಳ್ಳಿ: ಕೇಂದ್ರ ಸರ್ಕಾರ 2007ರಲ್ಲಿ ಜಾರಿ ಮಾಡಿದ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಕಾನೂನು ಸಮರ್ಪಕ ಜಾರಿಗಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂದ ಗೌರವ ಅಧ್ಯಕ್ಷ ಸ್ವಾಮಿ ಕಮಲ ಮನೋಹರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಕಲಂ 23&24 ಹಾಗೂ 41ರ ಪ್ರಕಾರ ದೇಶದ ಹಿರಿಯ ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಹಿರಿಯ ಜೀವಗಳು ಜೀವನ ನಡೆಸುವುದೇ ದುಸ್ತರವಾಗಿದೆ. ಬಡವರು ಉಪಜೀವನ ಸಾಗಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ ಅಡಿಯಲ್ಲಿ ಹಿರಿಯರ ಸಂಘಟನೆ, ಸೌಲಭ್ಯಗಳಿಗಾಗಿ ಹೋರಾಟ ರೂಪಿಸಲಾಗುತ್ತಿದೆ. ಮುಂಬರುವ ನವೆಂಬರ್ ಡಿಸೆಂಬರ್ ವೇಳೆಗೆ ವಿವಿಧ ರೀತಿಯ ಹೋರಾಟ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ಹಿರಿಯ ನಾಗರಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಭಾರತದಲ್ಲಿ 15 ಕೋಟಿ, ಕರ್ನಾಟಕದಲ್ಲಿ 80 ಲಕ್ಷ ಹಿರಿಯರು ಇದ್ದಾರೆ. ಇವರಿಗೆ ವಿಧಾನ ಪರಿಷತ್ ನಲ್ಲಿ ಒಂದು ಸ್ಥಾನ ನೀಡಬೇಕು, ಪ್ರತ್ಯೇಕ ಇಲಾಖೆ ಸೃಜಿಸಿ ಮಂತ್ರಿಯನ್ನು ನೇಮಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಬಿ.ಎ. ಪಾಟೀಲ್ ಮಾತನಾಡಿ, ಹಿರಿಯರಿಗೆ ಆರ್ಥಿಕ ಬಲ ಇಲ್ಲದಂತಾಗಿದೆ. ಹಿರಿಯರನ್ನು ರಾಷ್ಟ್ರದ ಸಂಪತ್ತು ಎಂದು ಘೋಷಿಸಬೇಕು. ಪಿಂಚಣಿ ಇಲ್ಲದ ಹಿರಿಯರಿಗೆ ಕೂಡಲೇ 10 ಸಾವಿರ ರೂ. ಪಿಂಚಣಿ ನೀಡಬೇಕು. ಉಚಿತ ವೈದ್ಯಕಿಯ ಚಿಕಿತ್ಸೆ ನೀಡಬೇಕು, ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಿಭಾಗ ತೆರೆಯಬೇಕು ಎಂದು ಆಗ್ರಹಿಸಿದರು.
ಸಂಘದ ಡಿ.ಟಿ. ಪಾಟೀಲ ಹಾಗೂ ಸುನಂದಾ ಗೋಷ್ಠಿಯಲ್ಲಿದ್ದರು.