ಮಹಿಳೆಯರಿಗೂ ಸಮಾನ ಗೌರವ ನೀಡಿ

10ark3
ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಮನೆಯ ಶಾಲಾ ವಾರ್ಷಿಕೋತ್ಸವ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಶಾಸಕ ಎ. ಮಂಜು ಸನ್ಮಾನಿಸಿದರು. ತಾರಾ ಮಂಜು, ಡಾ. ಅಶೋಕ್, ಕಾಳಾಬೋಯಿ, ಮಹೇಶ್ ಇತರರಿದ್ದರು.
Published on

ಅರಕಲಗೂಡು: ನಮ್ಮೆಲ್ಲರ ಏಳಿಗೆಗೆ ಕಾರಣರಾದ ಮಹಿಳೆಯರಿಗೆ ಸಮಾನ ಗೌರವ ನೀಡಬೇಕು ಎಂದು ಶಾಸಕ ಎ.ಮಂಜು ಹೇಳಿದರು.

ತಾಲೂಕಿನ ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಕ್ಕಳ ಮನೆ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಬದಲಾವಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಹಿಳಾ ಸಾಧಕಿಯರನ್ನು ಗುರುತಿಸಿ ಗೌರವಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಳೆದ ವರ್ಷ ನನ್ನ ಸ್ವಂತ ಊರಿನಲ್ಲಿ ದೇವರಹಟ್ಟಿ ಕುಟುಂಬದಿಂದ ಮೊದಲ ಬಾರಿಗೆ ಮಕ್ಕಳ ಮನೆ ಎಲ್‌ಕೆಜಿ, ಯುಕೆಜಿ ಸರ್ಕಾರಿ ಶಾಲಾ ಆವರಣದಲ್ಲಿ ತೆರೆಯಲಾಗಿತ್ತು. ಪಾಲಕರು, ದಾನಿಗಳು, ಶಿಕ್ಷಣ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಗ್ರಾಪಂನಿಂದ ಸಹಕಾರ ಸಿಕ್ಕಿ ಯಶಸ್ವಿಯಾಯಿತು. ಈ ಸಲುವಾಗಿ ಮತ್ತೆ 12 ಕಡೆ ಸರ್ಕಾರಿ ಶಾಲಾ ಆವರಣದಲ್ಲಿ ಮಕ್ಕಳ ಮನೆಯನ್ನು ಆರಂಭಿಸಿದೆವು. ಈ ಕಾರ್ಯ ಕೂಡ ಅತ್ಯಂತ ಯಶಸ್ವಿಯಾಯಿತು. ಈಗ ಈ ಪುಟಾಣಿಗಳು ಆಕರ್ಷಣೀಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ಖಾಸಗಿ ಶಾಲಾ ಮಕ್ಕಳಿಗೆ ಪೈಪೋಟಿ ನೀಡಿದ್ದಾರೆ. ಇದು ನನ್ನ ಪತ್ನಿ ತಾರಾ ಮಂಜುಗೌಡರ ಶ್ರಮಕ್ಕೆ ಸಿಕ್ಕಿದ ದೊಡ್ಡಪುರಸ್ಕಾರ ಎಂದು ಭಾವಿಸುತ್ತೇನೆ, ಮಹಿಳೆಯರ ಶಕ್ತಿಗೆ ತಾಜಾ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿಯೂ ಮಕ್ಕಳ ಮನೆಯನ್ನು ಆರಂಭಿಸುವ ಚಿಂತನೆ ನಡೆದಿದೆ. ಇದೇ ನಿಟ್ಟಿನಲ್ಲಿ ಮಕ್ಕಳನ್ನು ಸೇರಿಸುವ ನಿಟ್ಟಿನಲ್ಲಿ ಪಾಲಕರು ಮುಂದಾಗಬೇಕಿದೆ. ಈ ಕಾರ್ಯದಿಂದ ಸರ್ಕಾರಿ ಶಾಲೆಗಳ ಉಳಿವಿಗೆ ಸಹಕಾರವಾಗಲಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಮಕ್ಕಳ ಮನೆ ಆರಂಭಿಸಲಾಗುವುದು. ಮುಂದಿನ ವರ್ಷ ಸುಮಾರು 5 ಸಾವಿರ ಮಕ್ಕಳ ಮನೆಯ ಚಿಣ್ಣರಿಂದ ಅದ್ದೂರಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ದೊಡ್ಡ ಹಬ್ಬದ ರೀತಿ ಆಚರಿಸುವಂತಾಗಬೇಕು ಎಂದರು.

ತಹಸೀಲ್ದಾರ್ ಸೌಮ್ಯಾ, ಬಿಇಒ ಕೆ.ಪಿ.ನಾರಾಯಣ್, ಜಿಪಂ ಮಾಜಿ ಸದಸ್ಯೆ ತಾರಾ ಮಂಜುಗೌಡ, ಇಂಜಿನಿಯರ್ ಕವಿತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ, ಗ್ರಾಪಂ ಅಧ್ಯಕ್ಷೆ ಪವನಕುಮಾರಿ, ಸಿಡಿಪಿಒ ವೆಂಕಟೇಶ್, ಹಾಸನ ಹೀಮ್ಸ್ ಲೆಕ್ಕ ಪರಿಶೋಧನಾ ಇಲಾಖೆ ಅಧಿಕಾರಿ ಡಾ.ಅಶೋಕ್ ಕುಮಾರ್ ಇತರರಿದ್ದರು.

ತಾಲೂಕಿನ 13 ಮಕ್ಕಳ ಮನೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಮನೆಯ ಶಿಕ್ಷಕರು, ಶಾಲಾ ಶಿಕ್ಷಕಿಯರನ್ನು ಗ್ಷರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net