ಯುವನಿಧಿ ಬೇಡ, ಕನ್ನಡಿಗರಿಗೆ ಉದ್ಯೋಗ ನೀಡಿ: ವಾಟಾಳ್ ನಾಗರಾಜ್

vatal
Published on

ಮೈಸೂರು: ರಾಜ್ಯ ಸರ್ಕಾರ ಯುವನಿಧಿ ಯೋಜನೆ ಕೈಬಿಟ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಯುವನಿಧಿಯಡಿ ಯುವಕರಿಗೆ ನೀಡುತ್ತಿರುವ 3,000 ರೂ.ನಲ್ಲಿ ಯುವಜನರು ಬದುಕು ರೂಪಿಸಿಕೊಳ್ಳಲು ಸಾಧ್ಯವೇ? ಈ ಯೋಜನೆಗಿಂತ ಉದ್ಯೋಗ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಬೇಕು. ಇರುವ ಉದ್ಯೋಗ ಸಹ ಅನ್ಯರಾಜದವರ ಪಾಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಹೊರರಾಜ್ಯದವರಿಗೆ ಉದ್ಯೋಗ ನೀಡುತ್ತಿದ್ದು, ಕನ್ನಡಿಗರಿಗೆ ಉದ್ಯೋಗ ನೀಡುತ್ತಿರುವುದು ಕಡಿಮೆ. ಕನ್ನಡಿಗರಿಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ದೊರೆತ್ತಿರುವ ಉದ್ಯೋಗದ ಮಾಹಿತಿ ಕುರಿತು ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು. ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ದೊರೆಯದೆ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದರೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಓದಿಸುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳೆಯರಿಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆ ಜಾರಿಗೊಳಿಸಿರುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ, ರಾಜ್ಯ ಸರ್ಕಾರ ಪುರು ಷರಿಗೆ ಯಾವುದೇ ಯೋಜನೆ ಜಾರಿಗೊಳಿಸಿಲ್ಲ. ರಾಜ್ಯ ಸರ್ಕಾರ ಪುರುಷರ ವಿರೋಧಿಯಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ನಾಮಫಲಕವನ್ನು ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಹಾಕಲೇ ಬೇಕು. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಕನ್ನಡದಲ್ಲಿ ನಾಮಫಲಕ ಹಾಕದೆ ಇದ್ದರೆ ನಾಮಫಲಕವನ್ನು ಒಡೆದು ಹಾಕುತ್ತೇವೆ. ಕನ್ನಡ ನಾಮಫಲಕ ಹಾಕಿ ಎಂದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ಹೋರಾಟ ಮಾಡಿಯೇ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net