

ಬ್ಯಾಕೋಡು: ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಈ ದೇಶದ ಆಸ್ತಿಯಾಗಿ ಮಾಡಬೇಕೆ ಹೊರತು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದು ಶ್ರೀಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ. ಎಸ್.ರಾಮಪ್ಪ ಹೇಳಿದರು.
ಸಾಗರ ತಾಲೂಕಿನ ಕುದರೂರು ಗ್ರಾಮಪಂಚಾಯಿತಿ ಸಭಾಭವನದಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ್ ಹಾಗೂ ಶ್ರೀ ಚೌಡಮ್ಮ ದೇವಿ ಎಜುಕೇಷನಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಕರೂರು ಹೋಬಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬರಹ ಪುಸ್ತಕ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದೇಶದ ಭವಿಷ್ಯದ ರೂವಾರಿಗಳು ಮಕ್ಕಳು ಎಂದರು.
ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತಾನಾಡಿದ ನವಚೇತನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಮಂಜುನಾಥ, ಟ್ರಸ್ಟ್ ಶರಾವತಿ ಹಿನ್ನೀರಿನ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರು.
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಬೊಬ್ಬಿಗೆ ಅವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನಾಲ್ಕು ಮಕ್ಕಳಿಗೆ ತಲಾ ಐದು ಸಾವಿರ ರೂ. ನಗದು ಬಹುಮಾನ ನೀಡಿದರು.
ಕುದರೂರು ಗ್ರಾಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಜ್ಯೋತಿ ಮೇಘರಾಜ, ಸದಸ್ಯರಾದ ಸುಧಾಕರ್, ಸುಜಾತಾ ಗಣಪತಿ, ರವಿ ಕುಣಜೆ, ಕೊಡಂದಪ್ಪ, ವಿಜಯಕುಮಾರ, ಶಿಕ್ಷಕ ಪ್ರಸನ್ನಕುಮಾರ್ ಇದ್ದರು.