

ಚಿಕ್ಕಮಗಳೂರು: ಕರ್ನಾಟಕದ ಆದಿವಾಸಿ ಮತ್ತು ಅಲೆಮಾರಿಗಳು ಸೇರಿ ಸುಮಾರು 120 ಸಮುದಾಯಗಳು ಸಂಘಟಿತರಾಗಿ ಡಾ.ಸಿ.ಎಸ್.ದ್ವಾರಕಾನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಬೇಕು ಎಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಎಚ್.ಎಲ್.ದಿವಾಕರ್ ಒತ್ತಾಯಿಸಿದರು.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಸದನಗಳಲ್ಲೂ ಅಲೆಮಾರಿ,ಆದಿವಾಸಿ ಸಮುದಾಯದ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಇದರಿಂದ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆ ಕುರಿತು ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಸಮಸ್ಯೆಗಳ ಕುರಿತು ಯಾರಿಗೂ ಅರಿವಿಲ್ಲ. ಇದರಿಂದ ನಾವು ಇಂದಿಗೂ ನಿರ್ಗತಿಕರಾಗಿ ಉಳಿದಿದ್ದೇವೆ ಎಂದು ತಿಳಿಸಿದರು.
ದ್ವಾರಕಾನಾಥ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ನಮ್ಮ ಎಲ್ಲ ಸಮುದಾಯಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಸುಮಾರು 48 ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ ಸರ್ಕಾರದ ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1ರಲ್ಲಿರುವ 46 ಅಲೆಮಾರಿ ಸಮುದಾಯಗಳಿಗೆ ಅಸ್ಮಿತೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೊಟ್ಟ ಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾಗಿದ್ದಾರೆ. ಅಲೆಮಾರಿ ಕೋಶ, ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಈಗ ಬಜೆಟ್‌ನಲ್ಲಿ ಪ್ರಕಟವಾದ ಅಲೆಮಾರಿ ಆಯೋಗ ರಚಿಸಲು ಕೂಡ ದ್ವಾರಕಾನಾಥ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ನಾಡಿನಾದ್ಯಂತ ಮೂಲೆ ಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿಕೇಟ್, ಸಾಲ, ನಿವೇಶನ, ಭೂಮಿ, ಅನುದಾನ, ಸವಲತ್ತು ಕೊಡಿಸಲು ತಮ್ಮ ಲಾಯರ್ ಆಫೀಸನ್ನೇ ಮೀಸಲಾಗಿ ಇಟ್ಟಿದ್ದಾರೆ ಎಂದರು.
ದ್ವಾರಕಾನಾಥ್ ಅವರು ಮಾತ್ರ ಎಲ್ಲ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಕುರಿತ ಪ್ರೀತಿ, ಕಾಳಜಿ, ಅರಿವು ಮತ್ತು ಜ್ಞಾನ ಉಳ್ಳವರು. ಅವರು ನಮ್ಮ ಎಲ್ಲಾ 120 ಸಮುದಾಯಗಳನ್ನು ವಿಧಾನಪರಿಷತ್‌ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ ದ್ವಾರಕಾನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.