ಕಾರಜೋಳ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ನೀಡಿ

protest
ಮುಧೋಳದಲ್ಲಿ ಬಿಜೆಪಿ ಮುಧೋಳ ನಗರ, ಗ್ರಾಮೀಣ ಘಟಕದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಡಾ.ರವಿ ನಂದಗಾಂವ, ಹನುಮಂತ ತುಳಸಿಗೇರಿ, ನಾರಾಯಣ ಯಡಹಳ್ಳಿ, ಸೋನಾಪಿ ಕುಲಕರ್ಣಿ, ರುದ್ರಪ್ಪ ಅಡವಿ, ಮಹ್ಮದ್ ಶೇಖ, ಬಂಡು ಘಾಟಗೆ, ಭೀಮನಗೌಡ ಪಾಟೀಲ, ತುಷಾರ ಭೂಪಳೆ ಇತರರಿದ್ದರು.
Published on

ಮುಧೋಳ: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಗೂಂಡಾಗಳನ್ನು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿದ ಘಟನೆಯಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬಿಜೆಪಿ ಮುಧೋಳ ನಗರ, ಗ್ರಾಮೀಣ ಘಟಕದ ವತಿಯಿಂದ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರು ಮಾತನಾಡಿ, ನಾಡು ಕಂಡ ಅಪರೂಪದ ರಾಜಕಾರಣಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬರದಂತೆ ಪಾರದರ್ಶಕ ಆಡಳಿತ ನಡೆಸಿದ ಧೀಮಂತ ನಾಯಕ. ತಮ್ಮ ಜೀವಮಾನವನ್ನು ದೀನ ದಲಿತರ, ಬಡವರ ಏಳಿಗೆಗೆ ಶ್ರಮಿಸಿದ್ದಾರೆ. ಆದರೆ, ಅವರು ಮೊನ್ನೆ ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಏಕಾಏಕಿ ಗೂಂಡಾಗಳು ಕಾರಜೋಳ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಅರಾಜಕತೆ ತಾಂಡವಾಡುತ್ತಿದೆ. ಜನಸಾಮನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಗೂಡಾಗಳನ್ನು ಬಳಸಿಕೊಂಡು ಬಿಜೆಪಿಯ ಪ್ರಭಾವಿ ನಾಯಕರನ್ನು ಹೆದರಿಸುವ ಯತ್ನ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಮಹಿಳಾ ವಿವಸ್ತ್ರ ಘಟನೆಯಿಂದ ಸಮಾಜ ತಲೆತಗ್ಗಿಸುವಂತಾಗಿದೆ. ಈ ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಇದರಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಡಾ. ರವಿ ನಂದಗಾಂವ, ಹನುಮಂತ ತುಳಸಿಗೇರಿ, ನಾರಾಯಣ ಯಡಹಳ್ಳಿ, ಸೋನಾಪಿ ಕುಲಕರ್ಣಿ, ರುದ್ರಪ್ಪ ಅಡವಿ, ಮಹ್ಮದ್ ಶೇಖ, ಬಂಡು ಘಾಟಗೆ, ಭೀಮನಗೌಡ ಪಾಟೀಲ, ತುಷಾರ ಬೂಪಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net