

ತಿ.ನರಸೀಪುರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಬದಲು ಸಮಾಜದಲ್ಲಿ ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಯೋಜನಾ ಸಮನ್ವಯಧಿಕಾರಿಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ಅಂಗವಿಕಲ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಂಕ ಶಿಬಿರ ಮತ್ತು ವಿಶ್ವ ವಿಶೇಷಚೇತನ ದಿನಾಚರಣೆಯಲ್ಲಿ ಮಾತನಾಡಿ, ಅಂಗವಿಕಲ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ಬೇಕು. ಅವಕಾಶ ಸಿಕ್ಕಿದ್ದರಿಂದಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿದರ್ಶನಗಳಿವೆ ಎಂದು ತಿಳಿಸಿದರು.
ಪಾಲಕರು ಅಂಗವಿಕಲ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದಲೂ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಂಕ ಶಿಬಿರದ ಮೂಲಕ ವಿಶೇಷ ಗಮನವನ್ನು ನೀಡಲಾಗುತ್ತಿದೆ ಎಂದರು.
ಅಂಗವಿಕಲ ಮಕ್ಕಳನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ವೈದ್ಯರಾದ ಡಾ.ದಯಾನಂದ ಬಾಬು, ಡಾ.ಮಾನಸ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಪ್ರಧಾನ ಕಾರ್ಯದರ್ಶಿ ಸೋಸ್ಲೆ ನಾಗೇಶ್,
ಬಿ.ಆರ್.ಸಿ.ನಾಗೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಮರಿಸ್ವಾಮಿ, ಪುರಸಭೆ ಸಮುದಾಯ ಸಂಘಟಕ ಮಹದೇವ ನಾಯಕ, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಬ್ರಮಣ್ಯ, ಶಿಕ್ಷಣ ಸಂಯೋಜಕ ಜಗದೀಶ್, ಇಸಿಒ ಚೆನ್ನಮಲ್ಲಿಕಾರ್ಜುನಸ್ವಾಮಿ, ಬಿಐಇ ಆರ್.ಟಿ.ವೆಂಕಟೇಶ್, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಅಲೀಮ್ ಕೋ ಸಂಸ್ಥೆಯ
ರೇಖಾ, ವಿಕ್ರಂ ಇತರರು ಇದ್ದರು.