

ದೊಡ್ಡಬಳ್ಳಾಪುರ: ಸಾಸಲು ಹೋಬಳಿ ಮಲ್ಲೇಗೌಡನಪಾಳ್ಯ, ಭಕ್ತರಹಳ್ಳಿ, ಸಿಂಗೇನಹಳ್ಳಿ, ಲಕ್ಕೇನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಗೋಮಾಳ ಜಮೀನು ಉಳುಮೆ ಮಾಡುತ್ತಿರುವ ಭೂರಹಿತ ರೈತರ ಜಮೀನು ಪೋಡಿ, ದುರಸ್ತಿ ತುರ್ತಾಗಿ ನಡೆಸಿ ರೈತರಿಗೆ ಸಾಗುವಳಿ ಪತ್ರಗಳನ್ನು ನೀಡುವಂತೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾರ್ಗದರ್ಶನ ನೀಡಿದರು.
ಮಲ್ಲೇಗೌಡನಪಾಳ್ಯದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸಾಸಲು ಹೋಬಳಿಯ ಲಕ್ಕೇನಹಳ್ಳಿ ಬಹುತೇಕ ರೈತರ ಜಮೀನು ಎತ್ತಿನಹೊಳೆ ನೀರು ಸಂಗ್ರಹಕ್ಕಾಗಿ ನಿರ್ಮಿಸಲಾಗುತ್ತಿರುವ ಜಲಾಶಯಕ್ಕೆ ಮುಳುಗಡೆಯಾಗುತ್ತಿದೆ. ಈ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ರೈತರಿಗೆ ನೀಡಬೇಕು.
ಸಾಸಲು ಹೋಬಳಿ ಭಾಗದ ವಿವಿಧ ಗ್ರಾಮಗಳ ಭೂರಹಿತ ರೈತರು ಭೂ ಮಂಜೂರಾತಿಗಾಗಿ ಅರ್ಜಿ ನಮೂನೆ- 57 ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಬಲಾಢ್ಯರು ಈ ಜಮೀನುಗಳಲ್ಲಿ ಅವರಿಗೆ ಇಷ್ಟ ಬಂದ ಕಡೆ ತಂತಿ ಬೇಲಿ ನಿರ್ಮಿಸುತ್ತಿದ್ದಾರೆ. ಇದನ್ನು ವಿರೋಧಿಸಿರುವ ರೈತರ ವಿರುದ್ಧ ದಾಖಲಾಗಿರುವ ದೂರುಗಳನ್ನು ಪೊಲೀಸರು ಸೂಕ್ತ ತನಿಖೆ ನಡೆಸಿ ರದ್ದು ಗೊಳಿಸಬೇಕು. ಇದರಿಂದ ಬಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ವಾಸ್ತದಲ್ಲಿ ಇಂದಿಗೂ ಉಳುಮೆ ಮಾಡುತ್ತಿರುವ ಅರ್ಹ ಭೂರಹಿತ ರೈತರಿಗೆ ಅನ್ಯಾಯವಾಗದಂತೆ ತ್ವರಿತವಾಗಿ ಸರ್ವೆ ನಡೆಸಿ ಸಾಗುವಳಿ ಚೀಟಿಗಳನ್ನು ವಿತರಿಸಬೇಕು ಎಂದರು. ಸಾಗುವಳಿ ಚೀಟಿ ವಿತರಣೆಯು ಪಕ್ಷಾತಿತವಾಗಿ ನಡೆಯಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.
ನಿಯಮದಂತೆ ಮಂಜೂರು : ನಮೂನೆ -57ರಲ್ಲಿ ಅರ್ಜಿ ಸಲ್ಲಿಸಿರುವ ರೈತರ ದಾಖಲೆಗಳನ್ನು ಪರಿಶೀಲಿಸಿ ಜಮೀನು ಡ್ರೋನ್ ಮೂಲಕ ಸರ್ವೇ ನಡೆಸಲಾಗುತ್ತಿದೆ. ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗದಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗಿನ ಭೂ ಮಂಜೂರಾತಿ ನಿಯಮದಂತೆ ನಮೂನೆ 1ರಿಂದ 5ನ್ನು ಸಿದ್ಧ ಮಾಡಿದ ನಂತರ ಸಾಗುವಳಿ ಚೀಟಿ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ವಿದ್ಯಾವಿಭಾ ರಾಥೋಡ್ ಹೇಳಿದರು.