ಪಡಿತರದಾರರಿಗೆ ಹಣದ ಬದಲಿಗೆ ಜೋಳ, ರಾಗಿ ನೀಡಿ

CHAMARASA MALI PATIL (2)
Published on

ರಾಯಚೂರು: ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿ ಬದಲು ಹಣ ನೀಡುವ ಬದಲಾಗಿ ಪಡಿತರದಾರರಿಗೆ ಜೋಳ, ರಾಗಿ, ತೊಗರಿ ಬೇಳೆ ನೀಡಲು ಮುಂದಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸರ್ಕಾರ ಐದು ಕೆಜಿ ಅಕ್ಕಿ ನೀಡಿ ಇನ್ನೂ ಐದು ಕೆಜಿ ಅಕ್ಕಿ ಬದಲಾಗಿ 170 ರೂ. ನೀಡುತ್ತಿದ್ದು, ಬಹಳಷ್ಟು ಜನರು ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸರ್ಕಾರ ಪಡಿತರದಾರರಿಗೆ ಐದು ಕೆಜಿ ಅಕ್ಕಿ ಬದಲು ನೀಡುತ್ತಿರುವ ಹಣಕ್ಕೆ 9,020 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅಕ್ಕಿ ನೀಡಿದರೆ ಇದಕ್ಕಿಂತ ಹೆಚ್ಚಿನ ಹಣ ವೆಚ್ಚವಾಗಲಿದೆ. ಅದರ ಬದಲು ಐದು ಕೆಜಿ ಜೋಳ ಅಥವಾ ರಾಗಿ, ಒಂದು ಕೆಜಿ ತೊಗರಿ ಬೆಳೆ, ಸೇಂಗಾ ಎಣ್ಣೆಯನ್ನು ಕಡಿಮೆ ವೆಚ್ಚದಲ್ಲಿ ಪೂರೈಕೆ ಮಾಡಬಹುದಾಗಿದೆ.
ಈ ಬಗ್ಗೆ ಕೃಷಿ ತಜ್ಞರೊಂದಿಗೆ ಅಧ್ಯಯನ ನಡೆಸಿ ಕೃಷಿ ಸಚಿವರಿಗೆ ;ಸಂಘದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೋಳ, ರಾಗಿ, ತೊಗರಿ ಬೆಳೆ ನೀಡುವುದರಿಂದ ರೈತರೂ ಅನುಕೂಲವಾಗಲಿದ್ದು, ಜನರಿಗೆ ಪೌಷ್ಠಿಕಾಂಶ ಧಾನ್ಯಗಳು ನೀಡಿದಂತಾಗಲಿದೆ.
ರಾಜ್ಯದಲ್ಲಿ 11 ಲಕ್ಷ ಟನ್ ರಾಗಿ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 3 ಲಕ್ಷ ಟನ್ ಖರೀದಿ ಮಾಡಬಹುದಾಗಿದೆ. 7 ಲಕ್ಷ ಟನ್ ಜೋಳ ಬೆಳೆಯಲಾಗುತ್ತಿದ್ದು, 3.5 ಲಕ್ಷ ಟನ್ ಹಾಗೂ 11 ಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿರುವ ತೊಗರಿಯಲ್ಲಿ ರೈತರು ಸ್ವಂತ ಬಳಕೆಗೆ ಶೇ.20ರಷ್ಟು ಉಳಿಸಿಕೊಂಡು ಉಳಿದದ್ದನ್ನು ಸರ್ಕಾರ ಖರೀದಿ ಮಾಡಬಹುದಾಗಿದೆ.
ಕೇಂದ್ರ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ ನೀಡುತ್ತಿದ್ದು, 10 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಸಿರಿಧಾನ್ಯಗಳನ್ನು ಕೂಡಾ ಪಡಿತರದಾರರಿಗೆ ನೀಡಬಹುದಾಗಿದೆ. ರೈತರು ಹೈಬ್ರಿಡ್ ಬಿತ್ತನೆ ಬೀಜಗಳಿಗೆ ಮಾರು ಹೋಗುತ್ತಿದ್ದು, ಪಾರಂಪರಿಕ ಬೀಜ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಕಾರಿಗಳಾದ ಗೋವಿಂದ ನಾಯಕ, ದೇವರಾಜ ನಾಯಕ, ಬೂದಯ್ಯಸ್ವಾಮಿ, ಬ್ರಹ್ಮಯ್ಯ ನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net